ADVERTISEMENT

ಕ್ರಿಕೆಟ್‌: ಫೈನಲ್‌ಗೆ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ, ಒಂದು ರನ್‌ ಅಂತರದ ಗೆಲುವು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 6:44 IST
Last Updated 20 ಫೆಬ್ರುವರಿ 2021, 6:44 IST
ಮಣಿಕಂಠ ಎಸ್‌.ಬಿ.
ಮಣಿಕಂಠ ಎಸ್‌.ಬಿ.   

ಹುಬ್ಬಳ್ಳಿ: ರೋಚಕ ಹೋರಾಟಕ್ಕೆ ಕಾರಣವಾದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ‘ಪಿಆರ್‌ಎನ್‌’ ಟ್ರೋಫಿ ಅಂತರ ಕ್ಯಾಂಪ್‌ಗಳ ಆಹ್ವಾನಿತಕ್ರಿಕೆಟ್ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ನಾಕೌಟ್‌ ಹಂತದ ಪಂದ್ಯವನ್ನು ತಲಾ 50 ಓವರ್‌ ನಡೆಸುವುದಾಗಿ ಸಂಘಟಕರು ಮೊದಲು ತಿಳಿಸಿದ್ದರು. ಗುರುವಾರ ಮಳೆ ಸುರಿದ ಕಾರಣ ಹಾಗೂ ಶುಕ್ರವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿದ್ದರಿಂದ ಪಂದ್ಯವನ್ನು ತಲಾ 23 ಓವರ್‌ಗಳಿಗೆ ಕಡಿತಗೊಳಿಸಲಾಯಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಎಚ್‌ಸಿಎ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 126 ರನ್‌ ಕಲೆಹಾಕಿತು. ಅನ್ಮೋಲ್‌ ಪಗಾಡ್‌ (35) ಮತ್ತು ಮಣಿಕಂಠ ಎಸ್‌. ಬುಕಿಟಗಾರ (25) ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು.

ADVERTISEMENT

ಎದುರಾಳಿ ಹುಬ್ಬಳ್ಳಿ ಕೋಲ್ಟ್ಸ್‌ ತಂಡ 22.5 ಓವರ್‌ಗಳಲ್ಲಿ 125 ರನ್‌ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಈ ತಂಡದ ಆದರ್ಶ ಸುರೇಬಾನ್‌ (40) ಮತ್ತು ಮಾಧವ ಡಿ. (33) ಉತ್ತಮ ಹೋರಾಟ ತೋರಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಎಚ್‌ಸಿಎ ತಂಡದ ಆದಿತ್ಯ ಯ. ಹಾಗೂ ಮಣಿಕಂಠ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ಜಯ ತಂದುಕೊಡುವಲ್ಲಿ ಪ್ರಮುಖ ಕಾರಣರಾದರು. ಅತಿಥಿಯಾಗಿ ಬಂದಿದ್ದ ಅರ್ಜುನ ಪಾಟೀಲ ಅವರು ಮಣಿಕಂಠಗೆ ಪಂದ್ಯ ಶ್ರೇಷ್ಠ ಗೌರವ ನೀಡಿದರು.

ಶನಿವಾರ ನಡೆಯುವ ಎರಡನೇ ಸೆಮಿಫೈನಲ್‌ನಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಮತ್ತು ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ (ವಿಎಂಸಿಎ) ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಎಚ್‌ಸಿಎ ವಿರುದ್ಧ ಪಂದ್ಯವಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.