ADVERTISEMENT

ಭಾರತ ತಂಡದಲ್ಲಿ ಅವಕಾಶ ಕಳೆದುಕೊಂಡದ್ದಕ್ಕೆ ಬೇಸರವಾಗುತ್ತದೆ: ರಜತ್ ಪಾಟೀದಾರ್

ಪಿಟಿಐ
Published 14 ಡಿಸೆಂಬರ್ 2024, 12:40 IST
Last Updated 14 ಡಿಸೆಂಬರ್ 2024, 12:40 IST
   

ಬೆಂಗಳೂರು: ಮಧ್ಯಪ್ರದೇಶದ ಬ್ಯಾಟರ್‌ ರಜತ್‌ ಪಾಟೀದಾರ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನ ಆರಂಭ ಅಂದುಕೊಂಡಂತೆ ಆಗಲಿಲ್ಲ. ಆದರೆ, ಅವರು ಭಾರತ ತಂಡದಲ್ಲಿ ಮತ್ತೊಮ್ಮೆ ಅವಕಾಶ ಗಿಟ್ಟಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2024ರ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಟೆಸ್ಟ್‌ ಕ್ರಿಕೆಟ್‌ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ರಜತ್‌, ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆಡಿದ ಆರು ಇನಿಂಗ್ಸ್‌ಗಳಲ್ಲಿ ಅವರು, ಕೇವಲ 60 ರನ್ ಗಳಿಸಿದ್ದರು. ಆದರೆ, ಈ ಬಾರಿಯ ರಣಜಿ ಟೂರ್ನಿಯ ಮೊದಲಾರ್ಧ ಮತ್ತು ಸದ್ಯ ನಡೆಯುತ್ತಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ್ದಾರೆ.

ಭಾರತ ಪರ ಆಡಿದ ಮೊದಲ ಸರಣಿಯಲ್ಲಿ ಅನುಭವಿಸಿದ ವೈಫಲ್ಯದ ಕುರಿತು ರಜತ್‌ ಮಾತನಾಡಿದ್ದಾರೆ. 'ಟೆಸ್ಟ್‌ ತಂಡದಲ್ಲಿ ಆಯ್ಕೆಯಾದದ್ದನ್ನು ಸಂಭ್ರಮಿಸಿದ್ದೆ. ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಕೆಲವೊಮ್ಮೆ ಬೇಸರವಾಗುತ್ತದೆ. ಆದರೂ, ಪರವಾಗಿಲ್ಲ. ನಾವು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ' ಎಂದು ಶನಿವಾರ ಹೇಳಿದ್ದಾರೆ.

ADVERTISEMENT

ವೈಫಲ್ಯ ಅನುಭವಿಸಿದ್ದನ್ನು ಒಪ್ಪಿಕೊಂಡಿರುವ ಅವರು, ಅದರಿಂದ ಹೊರಬಂದಿರುವುದಾಗಿ ಹೇಳಿದ್ದಾರೆ.

'ನನ್ನ ಪ್ರಕಾರ ಸ್ವೀಕರಿಸುವುದು ಬಹಳ ಮುಖ್ಯ. ಕ್ರಿಕೆಟ್‌ ಪಯಣದಲ್ಲಿ ವೈಫಲ್ಯಗಳು ಎದುರಾಗುತ್ತವೆ ಎಂಬುದನ್ನು ಒಪ್ಪಿಕೊಳ್ಳಬೇಕು. ಸವಾಲನ್ನು ಎದುರಿಸಲು ಮತ್ತು ಅದರಿಂದ ಕಲಿಯಲು ನನಗೆ ಅದು (ಒಪ್ಪಿಕೊಳ್ಳುವುದು) ಮುಖ್ಯವಾಗುತ್ತದೆ. ನಾನು ಆ ವೈಫಲ್ಯವನ್ನು ಒಪ್ಪಿಕೊಂಡಿದ್ದೇನೆ ಮತ್ತು ಅದನ್ನು ದಾಟಿ ಮುಂದೆ ಬಂದಿದ್ದೇನೆ. ಅದು ಆಟದ ಭಾಗ' ಎಂದಿದ್ದಾರೆ.

ಹಾಗೆಯೇ, ಟೀಂ ಇಂಡಿಯಾದಲ್ಲಿ ಮತ್ತೆ ಸ್ಥಾನ ಗಿಟ್ಟಿಸುವ ಕುರಿತು, 'ಅಂತಹ ಅವಕಾಶಗಳನ್ನು ಮತ್ತೊಮ್ಮೆ ಸೃಷ್ಟಿಸಿಕೊಳ್ಳಬಲ್ಲೆ' ಎಂದು ವಿಶ್ವಾಸದಿಂದ ಹೇಳಿದ್ದಾರೆ.

31 ವರ್ಷ ರಜತ್‌, ದೇಶೀಯ ಕ್ರಿಕೆಟ್‌ನಲ್ಲಿ ಲೀಲಾಜಾಲವಾಗಿ ರನ್‌ ಗಳಿಸಿದ್ದಾರೆ. ಮಧ್ಯಪ್ರದೇಶ ತಂಡದ ಪರ ಅವರು ರಣಜಿ ಟೂರ್ನಿಯಲ್ಲಿ ಐದು ಪಂದ್ಯಗಳಿಂದ 53.37ರ ಸರಾಸರಿಯಲ್ಲಿ 427 ರನ್ ಗಳಿಸಿದ್ದಾರೆ.

ಸಯ್ಯದ್‌ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ರಜತ್‌, 9 ಪಂದ್ಯಗಳ 8 ಇನಿಂಗ್ಸ್‌ಗಳಿಂದ 182.63ರ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಲ್ಲಿ 347 ರನ್ ಗಳಿಸಿದ್ದಾರೆ. ಮುಂಬೈನ ಅಜಿಂಕ್ಯ ರಹಾನೆ (432) ಮತ್ತು ಬಿಹಾರ ಸಕೀಬುಲ್‌ ಗನಿ (353 ರನ್‌) ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.