ADVERTISEMENT

ವಿಶ್ವಕಪ್‌ ತಂಡದಿಂದ ಔಟ್, ಅಭಿಮಾನಿಗಳ ಬಳಿ ನೋವು ತೋಡಿಕೊಂಡ ಶಿಖರ್ ಧವನ್

ಟ್ವಿಟರ್‌ನಲ್ಲಿ ಭಾವನಾತ್ಮಕ ವಿಡಿಯೊ ಸಂದೇಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 5:21 IST
Last Updated 20 ಜೂನ್ 2019, 5:21 IST
ಶಿಖರ್ ಧವನ್
ಶಿಖರ್ ಧವನ್   

ಬೆಂಗಳೂರು:ಎಡಗೈ ಹೆಬ್ಬೆರಳಿನ ಗಾಯ ಗುಣವಾಗದಿರುವುದರಿಂದ ವಿಶ್ವಕಪ್ ಟೂರ್ನಿಯಲ್ಲಿ ತಂಡದಿಂದ ಹೊರಗುಳಿಯಬೇಕಾಗಿ ಬಂದಿರುವಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಟ್ವಿಟರ್‌ ಮೂಲಕ ಅಭಿಮಾನಿಗಳ ಬಳಿ ಬೇಸರ ಹಂಚಿಕೊಂಡಿದ್ದಾರೆ.

‘2019ರ ವಿಶ್ವಕಪ್‌ ತಂಡದ ಭಾಗವಾಗಿರುವುದಿಲ್ಲ ಎಂದು ಹೇಳಲು ಬೇಸರವಾಗುತ್ತಿದೆ. ದೌರ್ಭಾಗ್ಯವಶಾತ್, ನನ್ನ ಹೆಬ್ಬೆರಳ ಗಾಯ ನಿಗದಿತ ಸಮಯದಲ್ಲಿ ಗುಣವಾಗಿಲ್ಲ. ನಿಜವಾಗಿಯೂ ನನ್ನ ದೇಶಕ್ಕಾಗಿ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎಂಬ ಬಯಕೆ ನನ್ನದಾಗಿತ್ತು. ಇದೀಗ ತಂಡದಿಂದ ಹೊರಗುಳಿದು ಗುಣಮುಖನಾಗುವುದರತ್ತ ಮತ್ತು ಮುಂದಿನ ಟೂರ್ನಿಗಳತ್ತ ಗಮನಹರಿಸಬೇಕಿದೆ. ಭಾರತ ತಂಡದ ಎಲ್ಲ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಅವರು ವಿಶ್ವಕಪ್ ಗೆಲ್ಲಲಿದ್ದಾರೆ. ನಮಗಾಗಿ ಪ್ರಾರ್ಥಿಸುತ್ತಿರಿ, ನಮ್ಮನ್ನು ಬೆಂಬಲಿಸುತ್ತಿರಿ. ಸಹ ಆಟಗಾರರು ನೀಡಿದ ಬೆಂಬಲ ಮತ್ತು ಪ್ರೀತಿಗೆ ಋಣಿ. ಹಾಗೆಯೇ ನಿಮ್ಮ ಸಪೋರ್ಟ್‌ಮತ್ತು ಪ್ರಾರ್ಥನೆ ನಮಗೆ ತುಂಬಾ ಮುಖ್ಯವಾದದ್ದು. ಅದಕ್ಕಾಗಿ ಧನ್ಯವಾದಗಳು. ಜೈ ಹಿಂದ್!’ ಎಂದು ಧವನ್ ಟ್ವೀಟ್ ಮಾಡಿದ್ದಾರೆ. ಜತೆಗೆ, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೊವನ್ನೂ ಪೋಸ್ಟ್ ಮಾಡಿದ್ದಾರೆ.

ADVERTISEMENT

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಆದ್ದರಿಂದ ಅವರಿಗೆ ಮೂರು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಆದ್ದರಿಂದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಮುಂಬರುವ ಅಫ್ಗಾನಿಸ್ತಾನ (ಜೂನ್ 22) ಮತ್ತು ವೆಸ್ಟ್ ಇಂಡೀಸ್ (ಜೂನ್ 27) ಪಂದ್ಯಗಳಲ್ಲಿಯೂ ಅವರಿಗೆ ಆಡುವಂತಿರಲಿಲ್ಲ. ಆದರೆ ಬುಧವಾರ ಅವರ ಗಾಯದ ತಪಾಸಣೆ ನಡೆಸಿದ ವೈದ್ಯರು ದೀರ್ಘ ಕಾಲದ ವಿಶ್ರಾಂತಿಗೆ ಸಲಹೆ ನೀಡಿದ್ದಾರೆನ್ನಲಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.