ADVERTISEMENT

IPL | ಭಾರತ ತಂಡಕ್ಕೆ ಮರಳಲು ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ: ದಿನೇಶ್ ಕಾರ್ತಿಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಏಪ್ರಿಲ್ 2022, 7:11 IST
Last Updated 17 ಏಪ್ರಿಲ್ 2022, 7:11 IST
ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ
ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ   

ಬೆಂಗಳೂರು: ‘ಭಾರತ ಕ್ರಿಕೆಟ್‌ ತಂಡಕ್ಕೆ ಸೇರ್ಪಡೆಯಾಗಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ’ ಎಂದು ಆರ್‌ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

36 ವರ್ಷದ ಕಾರ್ತಿಕ್‌, 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ (55) ಹಾಗೂ ದಿನೇಶ್ ಕಾರ್ತಿಕ್ (66*) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16 ರನ್ ಅಂತರದ ಗೆಲುವು ದಾಖಲಿಸಿತ್ತು.

ADVERTISEMENT

ಈ ಮೂಲಕ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕನೇ ಜಯದೊಂದಿಗೆ ಒಟ್ಟು ಎಂಟು ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಪಂದ್ಯ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ತಿಕ್, ‘ನನಗೆ ದೊಡ್ಡ ಗುರಿ ಇದೆ ಎಂದು ಒಪ್ಪಿಕೊಳ್ಳಬೇಕು. ನಾನು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ದೇಶಕ್ಕಾಗಿ ಏನಾದರೂ ವಿಶೇಷವಾದದ್ದನ್ನು ಮಾಡಬೇಕೆಂಬುದು ನನ್ನ ಗುರಿಯಾಗಿದೆ. ನಾನು ಭಾರತ ತಂಡದ ಭಾಗವಾಗಲು ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಈ ಪಂದ್ಯದಲ್ಲಿ 34 ಎಸೆತಗಳನ್ನು ಎದುರಿದ ಕಾರ್ತಿಕ್ 66 ರನ್ ಗಳಿಸಿದ್ದರು. ಇದರಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ ಸೇರಿವೆ. ಕೇವಲ 26 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಪೈಕಿ ಮುಸ್ತಾಫಿಜುರ್ ರೆಹಮಾನ್ ಎಸೆದ 18ನೇ ಓವರ್‌ನಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಸೇರಿದಂತೆ 28 ರನ್ ಸಿಡಿಸಿದರು.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಕಣಕ್ಕಿಳಿಯುವ ಭಾರತಕ್ಕೆ ತಂಡಕ್ಕೆ ಕಾರ್ತಿಕ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಾರ್ತಿಕ್, ಐಪಿಎಲ್‌ ಟೂರ್ನಿಯಲ್ಲಿ ಆಡಿರುವ ಆರು ಪಂದ್ಯಗಲ್ಲಿ 197 ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.