ದುಬೈ: ‘ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನನ್ನಿಂದ ಇಂತಹ ಆಟ ಹೊರಹೊಮ್ಮಿದ್ದರ ಬಗ್ಗೆ ತೀವ್ರ ಅಚ್ಚರಿಯಾಗಿದೆ. ಅದರಿಂದ ಆತ್ಮವಿಶ್ವಾಸ ಮರಳುತ್ತಿದೆ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಹೇಳಿದ್ಧಾರೆ.
ಸೋಮವಾರ ಸನ್‌ರೈಸರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಎಬಿಡಿ ಅರ್ಧಶತಕ (51ರನ್) ಹೊಡೆದಿದ್ದರು. ಅದರಿಂದಾಗಿ ತಂಡವು 163 ರನ್ ಗಳಿಸಲು ಸಾಧ್ಯವಾಗಿತ್ತು. ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ 10 ರನ್‌ಗಳಿಂದ ಸೋತಿತ್ತು.
‘ಸುಮಾರು ಏಳೆಂಟು ತಿಂಗಳುಗಳಿಂದ ಕ್ರಿಕೆಟ್ ಆಡಿಯೇ ಇಲ್ಲ. 36 ವರ್ಷದ ನಾನು ಇಲ್ಲಿಗೆ ಬಂದು ಪ್ರತಿಭಾನ್ವಿತ ಯುವ ಆಟಗಾರರೊಂದಿಗೆ ಆಡುತ್ತಿರುವುದು ಖುಷಿ ಕೊಡುತ್ತಿದೆ. ನಾನು ಕಲಿತ ಕ್ರಿಕೆಟ್ ಮೂಲಪಾಠಗಳನ್ನು ಮರೆತಿಲ್ಲವನ್ನುವುದೇ ಸಂತಸ’ ಎಂದು ಹೇಳಿದರು.
ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿ ಅರ್ಧಶತಕ ಗಳಿಸಿದ ಕರ್ನಾಟಕದ ದೇವದತ್ತ ಪಡಿಕ್ಕಲ್ ಅವರನ್ನು ಎಬಿಡಿ ಶ್ಲಾಘಿಸಿದರು.
‘ಶಾಂತ ಸ್ವಭಾವದ ಹುಡುಗ ಪಡಿಕ್ಕಲ್. ಚೆನ್ನಾಗಿ ಆಡಿದರು. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದರು.
ದಕ್ಷಿಣ ಆಫ್ರಿಕಾ ಎಬಿಡಿ ಈ ಸಲದ ಐಪಿಎಲ್‌ನಲ್ಲಿ ಆಡುವುದಿಲ್ಲವೆಂಬ ಮಾತುಗಳೂ ಕೇಳಿಬಂದ್ದಿದ್ವವು. ಅವರು ನೇರವಾಗಿ ಯುಎಇಗೆ ತೆರಳಿ ತಂಡವನ್ನು ಸೇರಿಕೊಡಿದ್ದರು.
‘ಐಪಿಎಲ್‌ನಲ್ಲಿ ಆಡುವುದು ಈಗಿನ ಕಾಲಘಟ್ಟದಲ್ಲಿ ಸುಲಭವಲ್ಲ. ಏಕೆಂದರೆ ಪ್ರತಿವರ್ಷವೂ 19–20 ವರ್ಷದೊಳಗಿನ ಹುಡುಗರು ಇಲ್ಲಿ ತಮ್ಮ ಅಗಾಧ ಸಾಮರ್ಥ್ಯವನ್ನು ಪಣಕ್ಕೊಡ್ಡುತ್ತಿದ್ದಾರೆ. ಅವರೊಂದಿಗೆ ಪೈಪೋಟಿ ನಡೆಸಿ ಸ್ಥಾನ ಉಳಿಸಿಕೊಳ್ಳುವುದು ನಮ್ಮಂತವಹರಿಗೆ ಸವಾಲೇ ಸರಿ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.