ADVERTISEMENT

ಟು ಟಯರ್ ಟೆಸ್ಟ್ ಸರಣಿ ಬಗ್ಗೆ ಈ ತಿಂಗಳಲ್ಲಿ ಐಸಿಸಿ, ಬಿಸಿಸಿಐ, ಸಿಎ, ಇಸಿಬಿ ಚರ್ಚೆ

ಪಿಟಿಐ
Published 6 ಜನವರಿ 2025, 10:23 IST
Last Updated 6 ಜನವರಿ 2025, 10:23 IST
Kolkata: BCCI  Secretary Jay Shah during 90th AGM of BCCI in Kolkata on Saturday, December 04, 2021. (Photo: IANS)
Kolkata: BCCI Secretary Jay Shah during 90th AGM of BCCI in Kolkata on Saturday, December 04, 2021. (Photo: IANS)   

ನವದೆಹಲಿ: ಟು ಟಯರ್ ಟೆಸ್ಟ್ ಸರಣಿಗಳನ್ನು ಆಯೋಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು(ಐಸಿಸಿ) ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳ ಕ್ರಿಕೆಟ್ ಮಂಡಳಿಗಳ ಜೊತೆ ಚರ್ಚೆ ನಡೆಸಲು ಉದ್ದೇಶಿಸಿದೆ.

ಈ ಬಿಗ್–3 ದೇಶಗಳ ನಡುವೆ ಮತ್ತಷ್ಟು ಟೆಸ್ಟ್ ಸರಣಿಗಳನ್ನು ಆಯೋಜಿಸುವುದು ಈ ಟು ಟಯರ್ ಮಾದರಿಯ ಉದ್ದೇಶವಾಗಿದೆ.

ಐಸಿಸಿಯ ನೂತನ ಅಧ್ಯಕ್ಷ ಜಯ್ ಶಾ ಅವರು ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಮೈಕ್ ಬೈರ್ಡ್, ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಿಚರ್ಡ್ ಥಾಮ್ಸನ್ ಜೊತೆ ಸರಣಿ ಆಯೋಜಿಸುವ ಸಾಧಕ–ಬಾಧಕಗಳ ಕುರಿತಂತೆ ಈ ತಿಂಗಳಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ‘ದಿ ಏಜ್’ ವರದಿ ಮಾಡಿದೆ.

ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ ಟು ಟಯರ್ ಸರಣಿ ಸೇರಿದಂತೆ ಯಾವುದೇ ಯೋಜನೆಯು 2027ರವರೆಗೆ ನಿಗದಿಯಾಗಿರುವ ಸರಣಿಗಳ ಬಳಿಕವೇ ಆಗಲಿದೆ ಎಂದು ಏಜ್ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಸದ್ಯ, ಜನವರಿ 12ರಂದು ಮುಂಬೈನಲ್ಲಿ ನಡೆಯಲಿರುವ ವಿಶೇಷ ಸಾಮಾನ್ಯ ಸಭೆಗೆ(ಎಸ್‌ಜಿಎಂ) ಬಿಸಿಸಿಐ ಸಜ್ಜಾಗುತ್ತಿದೆ. ಅಲ್ಲಿ ಹಂಗಾಮಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪೂರ್ಣಾವಧಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ಐಸಿಸಿ ಅಧ್ಯಕ್ಷರಾಗಿ ಶಾ ಅಧಿಕಾರ ವಹಿಸಿಕೊಂಡ ಬಳಿಕ ಬಿಸಿಸಿಐ ಹಂಗಾಮಿ ಕಾರ್ಯದರ್ಶಿಯಾಗಿ ದೇವಜಿತ್ ಅವರನ್ನು ನೇಮಕ ಮಾಡಲಾಗಿತ್ತು.

2016ರಲ್ಲಿ ಮೊದಲ ಬಾರಿಗೆ ಟು ಟಯರ್ ಟೆಸ್ಟ್ ಸರಣಿ ಕುರಿತಂತೆ ಐಸಿಸಿ ಅಂಗಳದಲ್ಲಿ ಚರ್ಚೆ ನಡೆದಿತ್ತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗ ಅಂತಹ ಯಾವುದೇ ಸರಣಿ ಕುರಿತ ಚರ್ಚೆ ಬಗ್ಗೆ ನಮಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಪ್ರಸ್ತುತ, ಎಸ್‌ಜಿಎಂಗಾಗಿ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಆದಾಯ ತಗ್ಗುವ ಆತಂಕದ ಹಿನ್ನೆಲೆಯಲ್ಲಿ ಈ ಮಾದರಿಯ ಸರಣಿಗೆ ಬಿಸಿಸಿಐ, ಜಿಂಬಾಬ್ವೆ, ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಗಳು ವಿರೋಧಿಸಿದ್ದವು. ಅಗ್ರ ತಂಡಗಳ ಜೊತೆ ಆಡುವ ಅವಕಾಶವನ್ನು ಸಣ್ಣ ರಾಷ್ಟ್ರಗಳ ತಂಡಗಳು ಕಳೆದುಕೊಳ್ಳಲಿವೆ ಎಂದೂ ಆಪಾದಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.