ADVERTISEMENT

ಐಸಿಸಿ ಸಭೆ: ನಾಮಪತ್ರ ಪ್ರಕ್ರಿಯೆ ಕುರಿತು ಮಹತ್ವದ ನಿರ್ಧಾರ

ಪಿಟಿಐ
Published 9 ಆಗಸ್ಟ್ 2020, 13:49 IST
Last Updated 9 ಆಗಸ್ಟ್ 2020, 13:49 IST
ಐಸಿಸಿ
ಐಸಿಸಿ   

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಮಂಡಳಿ ಸಭೆ ಸೋಮವಾರ ನಡೆಯಲಿದ್ದು ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿದ ನಾಮಪತ್ರ ಸಲ್ಲಿಕೆ ಚಟುವಟಿಕೆಗೆ ಅಂತಿಮ ರೂಪ ನೀಡಲಿದೆ. ಆನ್‌ಲೈನ್ ಮೂಲಕ ನಡೆಯಲಿರುವ ಸಭೆಯ ಕಾರ್ಯಸೂಚಿಯಲ್ಲಿ ಈ ಒಂದಂಶ ಮಾತ್ರ ಇದ್ದು ಚುನಾವಣೆಯಾಗಲಿ, ಅವಿರೋಧ ಆಯ್ಕೆಯಾಗಲಿ ನಾಲ್ಕು ವಾರಗಳ ಒಳಗೆ ನಡೆಸಲು ಐಸಿಸಿ ನಿರ್ಧರಿಸಿದೆ ಎನ್ನಲಾಗಿದೆ.

‘ನಾಮಪತ್ರ ಸಲ್ಲಿಸಲು ಎರಡು ವಾರಗಳ ಅವಕಾಶ ನೀಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಐಸಿಸಿಯಲ್ಲಿ ಯಾವುದೇ ಸ್ಥಾನಕ್ಕೇರಲು ಮೂರನೇ ಎರಡು ಅಂಶದ ಬಹುಮತ ಬೇಕು. ಆದರೆ ಈ ಬಾರಿ ಮುಖ್ಯಸ್ಥರ ಆಯ್ಕೆಗೆ ಸರಳ ಬಹುಮತವನ್ನು ಪರಿಗಣಿಸಲು ಅವಕಾಶ ನೀಡುವಂತೆ 17 ಸದಸ್ಯರ ಮಂಡಳಿ ಆಗ್ರಹಿಸಿದೆ’ ಎಂದು ಸದಸ್ಯರೊಬ್ಬರು ತಿಳಿಸಿದರು.

17 ಸದಸ್ಯರ ಪೈಕಿ ಟೆಸ್ಟ್ ಆಡುವ 12 ರಾಷ್ಟ್ರಗಳು ಇದ್ದು ಮೂರು ಸಹ–ರಾಷ್ಟ್ರಗಳು (ಮಲೇಷ್ಯಾ, ಸ್ಕಾಟ್ಲೆಂಡ್‌ ಮತ್ತು ಸಿಂಗಪುರ), ಅಧ್ಯಕ್ಷರು (ಸದ್ಯ ಹಂಗಾಮಿ) ಮತ್ತು ಸ್ವತಂತ್ರ ನಿರ್ದೇಶಕರು (ಪೆಪ್ಸಿಕೊದ ಇಂದ್ರ ನೂಯಿ) ಇದ್ದಾರೆ. ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾವ್ನಿ ಕೂಡ ಮಂಡಳಿ ಸದಸ್ಯರು. ಆದರೆ ಅವರಿಗೆ ಮತದಾನದ ಹಕ್ಕು ಇಲ್ಲ.

ADVERTISEMENT

ಅಭ್ಯರ್ಥಿಯನ್ನು ಐಸಿಸಿಯ ಮಾಜಿ ಅಥವಾ ಹಾಲಿ ನಿರ್ದೇಶಕರು ನಾಮನಿರ್ದೇಶನ ಮಾಡಬಹುದು. ಆದರೆ ಇದನ್ನು ಇಬ್ಬರು ಹಾಲಿ ನಿರ್ದೇಶಕರು ಅನುಮೋದಿಸಬೇಕು. ನಂತರವಷ್ಟೇ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಅರ್ಹರಾಗುತ್ತಾರೆ. ಮುಖ್ಯಸ್ಥರ ಹುದ್ದೆಗೆ ಕೆಲವು ಹೆಸರುಗಳು ಈಗಾಗಲೇ ಕೇಳಿಬಂದಿದ್ದು ಹಂಗಾಮಿ ಮುಖ್ಯಸ್ಥ ಸಿಂಗಪುರದ ಇಮ್ರಾನ್ ಖ್ವಾಜಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಅವಿರೋಧ ಅಭ್ಯರ್ಥಿ ಯಾರೂ ಇಲ್ಲದ ಕಾರಣ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆ ತಡವಾಗುತ್ತಿದೆ.

ಶಶಾಂಕ್ ಮನೋಹರ್ ರಾಜೀನಾಮೆ ನೀಡಿದ ನಂತರ ತೆರವಾಗಿರುವ ಸ್ಥಾನದ ಮೇಲೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಕಾಲಿನ್ ಗ್ರೆವ್ಸ್ ಅವರೂ ಕಣ್ಣಿಟ್ಟಿದ್ದು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷ ಡೇವ್ ಕ್ಯಾಮರಾನ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಆದರೆ ಅವರಿಗೆ ಸ್ವಂತ ಮಂಡಳಿಯಿಂದಲೇ ಬೆಂಬಲವಿಲ್ಲ!

ದಕ್ಷಿಣ ಆಫ್ರಿಕಾದ ಕ್ರಿಸ್ ನೆಂಜಾನಿ ಅವರೂ ಐಸಿಸಿ ಅಧ್ಯಕ್ಷರಾಗಲು ಆಸಕ್ತಿ ತೋರಿದ್ದಾರೆ. ದಕ್ಷಿಣ ಆಫ್ರಿಕಾದವರೇ ಆಗಿರುವ ಐಸಿಸಿ ನಿರ್ದೇಶಕ ಗ್ರೇಮ್ ಸ್ಮಿತ್ ಭಾರತದ ಸೌರವ್ ಗಂಗೂಲಿ ಅವರನ್ನು ಬೆಂಬಲಿಸುತ್ತಿದ್ದು ಅದು ಅವರ ವೈಯಕ್ತಿಕ ನಿರ್ಧಾರ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಈಗಾಗಲೇ ಸ್ಪಷ್ಟಪಡಿಸಿದೆ. ಗಂಗೂಲಿ ನಾಮಪತ್ರ ಸಲ್ಲಿಕೆಯು ಕೂಲಿಂಗ್ ಆಫ್ ಅವಧಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ಅವಲಂಬಿತವಾಗಿದೆ. ತೀರ್ಪು ಇದೇ 17ರಂದು ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.