ಜಯ್ ಶಾ
ಪಿಟಿಐ
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಜ್ಯ ಘಟಕಗಳ ವಿಶೇಷ ಸಾಮಾನ್ಯ ಸಭೆಯು ಮುಂಬೈನಲ್ಲಿ ಭಾನುವಾರ ನಡೆಯಲಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನೂತನ ಅಧ್ಯಕ್ಷ ಜಯ್ ಶಾ ಅವರನ್ನು ಸನ್ಮಾನಿಸಲಾಗುತ್ತದೆ.
ಶಾ ಅವರು ಐಸಿಸಿಯ ಮುಖ್ಯಸ್ಥರಾಗಿ ಕಳೆದ ವರ್ಷ ಆಗಸ್ಟ್‌ನಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. 2024ರ ಡಿಸೆಂಬರ್ 1ರಂದು ಅಧಿಕಾರ ಸ್ವೀಕರಿಸಿದ್ದಾರೆ. ಆ ಮೂಲಕ ಐಸಿಸಿ ಮುಖ್ಯಸ್ಥರಾದ ಅತಿ ಕಿರಿಯ ವ್ಯಕ್ತಿ ಎನಿಸಿದ್ದಾರೆ. ಅವರಿಗೂ ಮುನ್ನ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ ಅವರು ಐಸಿಸಿಯನ್ನು ಮುನ್ನಡೆಸಿದ್ದರು.
2019ರ ಅಕ್ಟೋಬರ್‌ನಿಂದ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಶಾ, 2021ರ ಜನವರಿಯಿಂದ ಏಷ್ಯಾ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿದ್ದರು.
ಸದ್ಯ ಬಿಸಿಸಿಐನ ಪದಾಧಿಕಾರಿಯಾಗಿಲ್ಲದ ಕಾರಣ ಅವರು, ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವುದಿಲ್ಲ.
ಕ್ರಿಕೆಟ್ ಅನ್ನು ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಬ್ರಿಸ್ಬೇನ್ ಒಲಿಂಪಿಕ್ಸ್ (2032) ಸಮಿತಿಯ ಉನ್ನತ ಅಧಿಕಾರಿಗಳೊಂದಿಗೆ ಶಾ ಮಾತುಕತೆ ನಡೆಸಿದ್ದಾರೆ.
2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸ್ಪರ್ಧೆ ಇರಲಿದೆ. ಇದರೊಂದಿಗೆ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳಿದಂತಾಗಲಿದೆ.
ಕ್ರಿಕೆಟ್ ಆಡುವ ಪ್ರಮುಖ ರಾಷ್ಟ್ರಗಳಾದ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಮತ್ತಷ್ಟು ಟೆಸ್ಟ್ ಸರಣಿಗಳನ್ನು ಆಯೋಜಿಸುವ ನಿಟ್ಟಿನಲ್ಲಿ, ಶಾ ಅವರು ಆಯಾ ಕ್ರಿಕೆಟ್ ಮಂಡಳಿಗಳ ಮುಖ್ಯಸ್ಥರೊಂದಿಗೆ ಈ ತಿಂಗಳ ಕೊನೆಯಲ್ಲಿ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.