ಶತಕ ಬಾರಿಸಿದ ಸಂಭ್ರಮದಲ್ಲಿ ಇಂಗ್ಲಿಸ್
ಲಾಹೋರ್: ದಾಖಲೆ ಮೊತ್ತ ಕಂಡ ಪಂದ್ಯದಲ್ಲಿ ಬೆನ್ ಡಕೆಟ್ ಅವರ 165 ರನ್‌ಗಳ (143 ಎಸೆತ) ಭರ್ಜರಿ ಶತಕದ ಆಟವು, ಜೋಸ್ ಇಂಗ್ಲಿಸ್ ಅವರ ಬಿರುಸಿನ ಶತಕದ (ಔಟಾಗದೇ 120, 86 ಎಸೆತ) ಮುಂದೆ ಕಳೆಗುಂದಿತು. ಸೇರಿಗೆ ಸವ್ವಾಸೇರು ಎನ್ನುವಂತೆ ಆಡಿದ ಆಸ್ಟ್ರೇಲಿಯಾ ತಂಡ ಚಾಂಪಿಯನ್ಸ್ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಶನಿವಾರ ಇಂಗ್ಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು.
ಗಡಾಫಿ ಕ್ರೀಡಾಂಗಣದಲ್ಲಿ ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಇಂಗ್ಲೆಂಡ್ ತಂಡ 8 ವಿಕೆಟ್‌ಗೆ 351 ರನ್ ಗಳಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿತ್ತು. ಆದರೆ ವಿಕೆಟ್ ಕೀಪರ್ ಇಂಗ್ಲಿಸ್ ಅವರ ಶತಕದ ಅಬ್ಬರದಲ್ಲಿ ಈ ಮೊತ್ತ ಆಸ್ಟ್ರೇಲಿಯಾಕ್ಕೆ ಸವಾಲೇ ಆಗಲಿಲ್ಲ. ಇನ್ನೂ 15 ಎಸೆತಗಳಿರುವಂತೆ ಸ್ಟೀವ್ ಸ್ಮಿತ್ ಬಳಗ 5 ವಿಕೆಟ್‌ಗೆ 356 ರನ್ ಹೊಡೆದು ಈ ಟೂರ್ನಿ ಮಾತ್ರವಲ್ಲ, ಐಸಿಸಿಯ ಯಾವುದೇ ಟೂರ್ನಿಯಲ್ಲಿ ಮೊತ್ತ ಬೆನ್ನಟ್ಟುವಿಕೆಯ ದಾಖಲೆ ನಿರ್ಮಿಸಿತು.
ಆರಂಭ ಆಟಗಾರ ಮ್ಯಾಥ್ಯೂ ಶಾರ್ಟ್ (63), ಅಲೆಕ್ಸ್ ಕ್ಯಾರಿ (69) ಮತ್ತು ಮಾರ್ನಸ್ ಲಾಬುಷೇನ್ (47) ಅವರೂ ಆಸ್ಟ್ರೇಲಿಯಾದ ಯಶಸ್ಸಿಗೆ ತಮ್ಮ ಕಾಣಿಕೆ ನೀಡಿದರು. ಅದರಲ್ಲೂ ಮೊತ್ತ 4 ವಿಕೆಟ್‌ಗೆ 136 ಆಗಿದ್ದಾಗ ಜೊತೆಗೂಡಿದ ಡಕೆಟ್ ಮತ್ತು ಅಲೆಕ್ಸ್ ಕ್ಯಾರಿ ಐದನೇ ವಿಕೆಟ್‌ಗೆ 110 ಎಸೆತಗಳಲ್ಲಿ 146 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಜೊತೆಯಾಟ ಪಂದ್ಯದ ಗತಿಯನ್ನು ಬದಲಾಯಿಸಿತು.
30 ವರ್ಷ ವಯಸ್ಸಿನ ಇಂಗ್ಲಿಷ್, ವೇಗದ ಬೌಲರ್ ಮಾರ್ಕ್ ವುಡ್ ಬೌಲಿಂಗ್‌ನಲ್ಲಿ ಡೀಪ್ ಮಿಡ್‌ವಿಕೆಟ್‌ಗೆ ಸಿಕ್ಸರ್ ಎತ್ತಿ ಅರ್ಹವಾಗಿ ಗೆಲುವಿನ ರನ್ ಹೊಡೆದರು. ಅವರ ಆಟದಲ್ಲಿ ಎಂಟು ಬೌಂಡರಿಗಳ ಜೊತೆ ಆರು ಸಿಕ್ಸರ್‌ಗಳಿದ್ದವು.
ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿರುವ ಆಸ್ಟ್ರೇಲಿಯಾಕ್ಕೆ ಆ ಕೊರತೆಯನ್ನು ಈ ಪಂದ್ಯದಲ್ಲಿ ಬ್ಯಾಟರ್‌ಗಳ ಆಟ ಸರಿದೂಗಿಸಿತು.
ಇದಕ್ಕೆ ಮೊದಲು, ಆರಂಭ ಆಟಗಾರ ಬೆನ್ ಡಕೆಟ್ ಅವರ ಮೂರನೇ ಶತಕದ ಹಾಗೂ ಜೀವನ ಶ್ರೇಷ್ಠ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ದೊಡ್ಡ ಮೊತ್ತ ಕಲೆಹಾಕಿತ್ತು. ಎಡಗೈ ಬ್ಯಾಟರ್ ಡಕೆಟ್, 17 ಬೌಂಡರಿಗಳ ಜೊತೆ ಮೂರು ಭರ್ಜರಿ ಸಿಕ್ಸರ್‌ಗಳನ್ನೂ ಸಿಡಿಸಿ ಇಂಗ್ಲೆಂಡ್ ಇನಿಂಗ್ಸ್‌ಗೆ ಆಧಾರವಾದರು.
ಈ ಟೂರ್ನಿಯಲ್ಲಿ ಇದು ಆಟಗಾರನೊಬ್ಬನ ಗರಿಷ್ಠ ವೈಯಕ್ತಿಕ ಮೊತ್ತ. ಈ ಹಿಂದೆ ನ್ಯೂಜಿಲೆಂಡ್‌ನ ನೇಥನ್ ಆ್ಯಸ್ಟಲ್ (2004ರಲ್ಲಿ) ಮತ್ತು ಜಿಂಬಾಬ್ವೆಯ ಆ್ಯಂಡಿ ಫ್ಲವರ್ (2002ರಲ್ಲಿ) ಅವರು 145 ರನ್ ಹೊಡೆದಿದ್ದು ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಹಿಂದಿನ ಗರಿಷ್ಠ ರನ್‌ಗಳ ದಾಖಲೆ ಹಂಚಿಕೊಂಡಿದ್ದರು.
ಅಮೆರಿಕ ವಿರುದ್ಧ 2004ರಲ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್‌ಗೆ 347 ರನ್ ಗಳಿಸಿದ್ದು, ಈ ಟೂರ್ನಿಯಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿತ್ತು. ಡಕೆಟ್ ಮೂರನೇ ವಿಕೆಟ್‌ಗೆ ಜೋ ರೂಟ್ (68, 78 ಎಸೆತ) ಜೊತೆ 158 ರನ್ ಸೇರಿಸಿ ಇಂಗ್ಲೆಂಡ್ ತಂಡ ದೊಡ್ಡ ಮೊತ್ತ ಗಳಿಸಲು ವೇದಿಕೆ ಸಿದ್ಧಪಡಿಸಿದರು.
ಅನುಭವಿ ವೇಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಹ್ಯಾಜಲ್‌ವುಡ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಹರಸಾಹಸಪಟ್ಟರು.
ಇಂಗ್ಲೆಂಡ್: 50 ಓವರುಗಳಲ್ಲಿ 8 ವಿಕೆಟ್‌ಗೆ 351 (ಬೆನ್ ಡಕೆಟ್ 165, ಜೋ ರೂಟ್ 68, ಜೋಸ್ ಬಟ್ಲರ್ 23, ಜೋಫ್ರಾ ಆರ್ಚರ್ ಔಟಾಗದೇ 21; ಬೆನ್ ದ್ವಾರ್ಶುಯಿಸ್ 66ಕ್ಕೆ3, ಜಂಪಾ 64ಕ್ಕೆ2, ಮಾರ್ನಸ್ ಲಾಬುಷೇನ್ 41ಕ್ಕೆ2);
ಆಸ್ಟ್ರೇಲಿಯಾ: 47.3 ಓವರುಗಳಲ್ಲಿ 5 ವಿಕೆಟ್‌ಗೆ 356 (ಮ್ಯಾಥ್ಯೂ ಶಾರ್ಟ್ 63, ಮಾರ್ನಸ್ ಲಾಬುಷೇನ್ 47, ಜೋಶ್ ಇಂಗ್ಲಿಸ್ ಔಟಾಗದೇ 120, ಅಲೆಕ್ಸ್ ಕ್ಯಾರಿ 69, ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೇ 32). ಪಂದ್ಯದ ಆಟಗಾರ: ಜೋಶ್ ಇಂಗ್ಲಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.