ರಯಾನ್ ರಿಕೆಲ್ಟನ್
(ಐಸಿಸಿ ಚಿತ್ರ)
ಕರಾಚಿ: ಆರಂಭ ಆಟಗಾರ ರಯಾನ್ ರಿಕೆಲ್ಟನ್ ಅವರ ಚೊಚ್ಚಲ ಏಕದಿನ ಶತಕ (103, 106ಎ) ಹಾಗೂ ಬೌಲರ್‌ಗಳ ಸಂಘಟಿತ ಪ್ರಯತ್ನದಿಂದ ದಕ್ಷಿಣ ಆಫ್ರಿಕಾ ತಂಡ, ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಅಫ್ಗಾನಿಸ್ತಾನ ತಂಡವನ್ನು 107 ರನ್‌ಗಳಿಂದ ಸುಲಭವಾಗಿ ಸೋಲಿಸಿ ಶುಭಾರಂಭ ಮಾಡಿತು.
ನ್ಯಾಷನಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ರಿಕೆಲ್ಟನ್ ಶತಕದ ಜೊತೆ, ನಾಯಕ ತೆಂಬಾ ಬವುಮಾ ತೆಂಬಾ ಬವುಮಾ (58, 76 ಎಸೆತ, 5 ಬೌಂಡರಿ), ರಸಿ ವಾನ್ ಡರ್ ಡಸೆ (52, 46ಎ) ಮತ್ತು ಏಡನ್ ಮರ್ಕರಂ (ಔಟಾಗದೇ 52, 36ಎ, 4x6, 6x1) ಅವರ ಅರ್ಧ ಶತಕಗಳ ಮೂಲಕ 6 ವಿಕೆಟ್‌ಗೆ 351 ರನ್‌ಗಳ ಉತ್ತಮ ಮೊತ್ತ ಗಳಿಸಿತು.
ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿರುವ ಅಫ್ಗಾನಿಸ್ತಾನ, ಈ ದೊಡ್ಡ ಮೊತ್ತದ ಎದುರು ಆರಂಭದಿಂದಲೇ ವಿಕೆಟ್‌ಗಳನ್ನು ಕಳೆದುಕೊಳ್ಳತೊಡಗಿತು. ಅಂತಿಮವಾಗಿ 43.3 ಓವರುಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು. ರಹಮತ್ ಶಾ (90, 92ಎ, 4x9, 6x1) ಏಕಾಂಗಿಯಾಗಿ ಹೋರಾಡಿದರು.
ಹರಿಣಗಳ ಪಡೆಯ ವೇಗದ ಬೌಲರ್‌ಗಳಾದ ಕಗಿಸೊ ರಬಾಡ (36ಕ್ಕೆ3), ವಿಯಾನ್ ಮುಲ್ಡರ್ (36ಕ್ಕೆ2), ಲುಂಗಿ ಗಿಡಿ (56ಕ್ಕೆ2) ಅವರು ಯಶಸ್ಸು ಗಳಿಸಿದರು.
ಇದಕ್ಕೆ ಮೊದಲು, 28 ವರ್ಷ ವಯಸ್ಸಿನ ಎಡಗೈ ಆಟಗಾರ ರಿಕಲ್ಟನ್ ಒಂದು ಸಿಕ್ಸರ್, ಏಳು ಬೌಂಡರಿಗಳಿದ್ದ 103 ರನ್ ಹೊಡೆದರು.
ಸಪಾಟಾದ ಪಿಚ್‌ನಲ್ಲಿ ಅಫ್ಗಾನಿಸ್ತಾನದ ಗುಣಮಟ್ಟದ ಸ್ಪಿನ್ ದಾಳಿಯನ್ನು ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ವಿಶ್ವಾಸದಿಂದ ನಿಭಾಯಿಸಿದರು. ಲೆಗ್ ಸ್ಪಿನ್ನರ್ ರಶೀದ್ ಖಾನ್ 10 ಓವರುಗಳಲ್ಲಿ ಒಂದೂ ವಿಕೆಟ್ ಪಡೆಯದೇ 59ರನ್ ಕೊಟ್ಟರು.
ಆರನೇ ಓವರಿನಲ್ಲಿ ದಾಳಿಗಿಳಿದ ಸ್ಪಿನ್ನರ್ ಮೊಹಮ್ಮದ್ ನಬಿ (51ಕ್ಕೆ2) ಮೊದಲ ಎಸೆತದಲ್ಲೇ ಟೋನಿ ಡಿ ಜಾರ್ಜಿ (11) ಅವರ ವಿಕೆಟ್ ಪಡೆದರು.
ಆದರೆ ರಿಕೆಲ್ಟನ್ ಮತ್ತು ಬವುಮಾ ಎರಡನೇ ವಿಕೆಟ್‌ಗೆ 129 ರನ್ ಸೇರಿಸಿ ಬೌಲರ್‌ಗಳನ್ನು ಕಾಡಿದರು. ಬವುಮಾ ಅವರೂ ನಬಿ ಅವರಿಗೆ ವಿಕೆಟ್ ನೀಡಿದ ನಂತರ ರಸಿ ವಾನ್ ಡರ್ ಡಸೆ, ರಿಕೆಲ್ಟನ್ ಜೊತೆಗೂಡಿ
ತಂಡದ ಮೊತ್ತವನ್ನು 36ನೇ ಓವರಿನಲ್ಲಿ 200 ದಾಟಿಸಿದರು. ಅದೇ ಓವರಿನಲ್ಲಿ ರಿಕೆಲ್ಟನ್ ಆಟ ರನೌಟ್ ಮೂಲಕ ಕೊನೆಗೊಂಡಿತು. ಏಕದಿನ ಪಂದ್ಯಗಳಲ್ಲಿ ರಿಕೆಲ್ಟನ್ ಅವರ ಈ ಹಿಂದಿನ ಗರಿಷ್ಠ ಮೊತ್ತ 91.
ಡಸೆ ರನ್ ವೇಗ ಹೆಚ್ಚಿಸಲು ಹೋಗಿ ಎರಡು ಸಿಕ್ಸರ್, ಮೂರು ಬೌಂಡರಿಗಳನ್ನು ಬಾರಿಸಿ 43ನೇ ಓವರಿನಲ್ಲಿ ನೂರ್ ಅಹ್ಮದ್ ಬೌಲಿಂಗ್‌ನಲ್ಲಿ ನಿರ್ಗಮಿಸಿದರು. ಇನ್ನೊಂದೆಡೆ ಮರ್ಕರಂ ಆಕ್ರಮಣಕಾರಿಯಾಗಿ ಆಡಿದರು. ಇದರಿಂದ ಕೊನೆಯ ಐದು ಓವರುಗಳಲ್ಲಿ 50 ರನ್‌ಗಳು ಹರಿದುಬಂದವು.
ದಕ್ಷಿಣ ಆಫ್ರಿಕಾ: 50 ಓವರುಗಳಲ್ಲಿ 6 ವಿಕೆಟ್‌ಗೆ 315 (ರಯಾನ್ ರಿಕಲ್ಟನ್ 103, ತೆಂಬಾ ಬವುಮಾ 58, ರಸಿ ವಾನ್ ಡರ್ ಡಸೆ 52, ಏಡನ್ ಮರ್ಕರಂ ಔಟಾಗದೇ 52; ಮೊಹಮ್ಮದ್ ಬಿ 51ಕ್ಕೆ2);
ಅಫ್ಗಾನಿಸ್ತಾನ: 43.3 ಓವರುಗಳಲ್ಲಿ 208 (ರಹಮತ್ ಶಾ 90, ಅಜ್ಮತ್‌ವುಲ್ಲಾ ಒಮರ್‌ಝೈ 18, ರಶೀದ್ ಖಾನ್ 18; ಕಗಿಸೊ ರಬಾಡ 36ಕ್ಕೆ3, ವಿಯಾನ್ ಮುಲ್ಡರ್ 36ಕ್ಕೆ2).
ಪಂದ್ಯದ ಆಟಗಾರ: ರಯಾನ್ ರಿಕೆಲ್ಟನ್.
302 words / 2165 characters
ರಿಕೆಲ್ಟನ್ ಅಮೋಘ ಶತಕ...
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾದ ಆರಂಭ ಉತ್ತಮವಾಗಿರಲಿಲ್ಲ. ಟೋನಿ ಡಿ ಜಾರ್ಜಿ(11) ಬೇಗನೇ ನಿರ್ಗಮಿಸಿದರು. ಈ ಹಂತದಲ್ಲಿ ಶತಕದ ಜೊತೆಯಾಟ ಕಟ್ಟಿದ ರಿಕೆಲ್ಟನ್ ಹಾಗೂ ನಾಯಕ ತೆಂಬಾ ಬವುಮಾ ಭದ್ರ ಅಡಿಪಾಯ ಹಾಕಿಕೊಟ್ಟರು.
ಬವುಮಾ 58 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. ಮಧ್ಯಮ ಕ್ರಮಾಂಕದಲ್ಲಿ ರೆಸಿ ವ್ಯಾನ್ ಡೆರ್ ಡಸೆ (52) ಹಾಗೂ ಏಡನ್ ಮರ್ಕರಂ (52*) ಆಕರ್ಷಕ ಅರ್ಧಶತಕಗಳನ್ನು ಗಳಿಸುವ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು.
ಅತ್ತ ಅಫ್ಗನ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರಯಾನ್ 103 ರನ್ ಗಳಿಸಿದರು. ಅವರ ಇನಿಂಗ್ಸ್‌ಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು.
ಡೇವಿಡ್ ಮಿಲ್ಲರ್ 14 ರನ್ ಗಳಿಸಿದರು. ಅಫ್ಗಾನಿಸ್ತಾನದ ಪರ ಮೊಹಮ್ಮದ್ ನಬಿ ಎರಡು ವಿಕೆಟ್ ಗಳಿಸಿದರು.
ಟಾಸ್ ಗೆದ್ದ ದ.ಆಫ್ರಿಕಾ...
ಈ ಮೊದಲು ಕರಾಚಿಯ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಬ್ಯಾಟಿಂಗ್ ಆಯ್ದುಕೊಂಡರು.
ಇದೇ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳೂ ಇವೆ.
1998ರಲ್ಲಿ ನಡೆದ ಚೊಚ್ಚಲ ಚಾಂಪಿಯನ್ಸ್ ಟ್ರೋಫಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅದಾದ ಬಳಿಕ ಈವರೆಗೆ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.
ಅಫ್ಗಾನಿಸ್ತಾನ ಪದಾರ್ಪಣೆ...
ಮತ್ತೊಂದೆಡೆ ಇದೇ ಮೊದಲ ಬಾರಿಗೆ ಅಫ್ಗಾನಿಸ್ತಾನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಆ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದೆ.
ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಶ್ರೀಲಂಕಾ, ವೆಸ್ಟ್ ಇಂಡೀಸ್ ಮುಂತಾದ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಗಳನ್ನೇ ಹಿಂದಿಕ್ಕಿ ಅಫ್ಗಾನಿಸ್ತಾನ ಪ್ರತಿಷ್ಠಿತ ಟೂರ್ನಿಯಲ್ಲಿ ಅರ್ಹತೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.