ADVERTISEMENT

ಚಾಂಪಿಯನ್ಸ್‌ ಟ್ರೋಫಿ SA vs NZ: ಕಿವೀಸ್‌ ಅಬ್ಬರಕ್ಕೆ ಬೆಚ್ಚಿದ ದಕ್ಷಿಣ ಆಫ್ರಿಕಾ

ಪಿಟಿಐ
Published 5 ಮಾರ್ಚ್ 2025, 20:43 IST
Last Updated 5 ಮಾರ್ಚ್ 2025, 20:43 IST
<div class="paragraphs"><p>ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್</p></div>

ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್

   

(ಚಿತ್ರ ಕೃಪೆ: X/@BLACKCAPS)

ಲಾಹೋರ್‌ : ರಚಿನ್ ರವೀಂದ್ರ (108, 101ಎ) ಮತ್ತು ಕೇನ್‌ ವಿಲಿಯಮ್ಸನ್‌ (102, 94ಎ) ಅವರು ಸೊಗಸಾದ ಶತಕಗಳನ್ನು ಬಾರಿಸಿ ನ್ಯೂಜಿಲೆಂಡ್ ತಂಡ ದಾಖಲೆ ಮೊತ್ತ ಪೇರಿಸಲು ನೆರವಾದರು. ಬಳಿಕ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿಹಾಕಿದರು. ಬುಧವಾರ ನಡೆದ ಚಾಂಪಿಯನ್ಸ್‌ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ 50 ರನ್‌ಗಳಿಂದ ಜಯಗಳಿಸಿತು.

ADVERTISEMENT

ಸ್ಯಾಂಟನರ್ ಪಡೆ, ದುಬೈನಲ್ಲಿ ಇದೇ 9ರಂದು ನಡೆಯುವ ಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಇದರೊಂದಿಗೆ ಆತಿಥೇಯ ಪಾಕ್‌ನಲ್ಲಿ ಟೂರ್ನಿಯ ಪಂದ್ಯಗಳು ಪೂರ್ಣಗೊಂಡವು.

ಗಡ್ಡಾಫಿ ಕ್ರೀಡಾಂಗಣದ ಬ್ಯಾಟಿಂಗ್ ಪಿಚ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ 6 ವಿಕೆಟ್‌ಗೆ 362 ರನ್‌ಗಳ ಗಳಿಸಿ ಈ ಟೂರ್ನಿಯ ಸರ್ವಾಧಿಕ ಮೊತ್ತ ಗಳಿಸಿತು. ಈ ಬೃಹತ್ ಮೊತ್ತದ ಎದುರು ದಕ್ಷಿಣ ಆಫ್ರಿಕಾ ತಂಡ ಒತ್ತಡಕ್ಕೆ ಸಿಲುಕಿತು. ಅಂತಿಮವಾಗಿ 9 ವಿಕೆಟ್‌ಗೆ 312 ರನ್ ಗಳಿಸಿ ಓವರುಗಳನ್ನು ಪೂರೈಸಿತು. ಡೇವಿಡ್‌ ಮಿಲ್ಲರ್ ಪರಾಕ್ರಮ ಮೆರೆದು ಅಜೇಯ ಶತಕ (100*, 67ಎ) ಬಾರಿಸಿದರು. ಕೊನೆಯ ಆಟಗಾರ ಲುಂಗಿ ಗಿಡಿ (1, 2ಎ) ಅವರನ್ನು ಅಪಾಯಕೊಡ್ಡದೇ ಆಲೌಟ್ ಆಗುವುದನ್ನೂ ತಡೆದರು. ಗೆಲುವಿನ ಅಂತರವನ್ನೂ ಕುಗ್ಗಿಸಿದರು.

ನಾಯಕ ತೆಂಬಾ ಬವುಮಾ (56, 71 ಎಸೆತ) ಮತ್ತು ರಸಿ ವಾನ್‌ಡರ್‌ ಡಸೆ (69, 66 ಎಸೆತ) ಎರಡನೇ ವಿಕೆಟ್‌ಗೆ 105 ರನ್ ಸೇರಿಸಿದ್ದೇ ಇನಿಂಗ್ಸ್‌ನ ದೊಡ್ಡ ಜೊತೆಯಾಟ ಎನಿಸಿತು. ಇವರಿಬ್ಬರ ವಿಕೆಟ್‌ಗಳನ್ನು ಎದುರಾಳಿ ನಾಯಕ ಸ್ಯಾಂಟನರ್ ‍(43ಕ್ಕೆ3) ಪಡೆದರು.

ರವೀಂದ್ರ, ಕೇನ್‌ ಅಬ್ಬರ:

ಬ್ಯಾಟ್ ಮಾಡಲು ನಿರ್ಧರಿಸಿದ ನ್ಯೂಜಿಲೆಂಡ್ ತಂಡಕ್ಕೆ ವಿಲ್ ಯಂಗ್‌ (21, 23ಎ) ಮತ್ತು ರವೀಂದ್ರ ಜೋಡಿ 48 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಎಂಟನೇ ಓವರಿನಲ್ಲಿ ವೇಗದ ಬೌಲರ್ ಲುಂಗಿ ಗಿಡಿ ಈ ಜೊತೆಯಾಟ ಮುರಿದರೂ ರನ್‌ ವೇಗದ ಮೇಲೆ ಸ್ವಲ್ಪವೂ ಪರಿಣಾಮವಾಗಲಿಲ್ಲ.

ಎಡಗೈ ಬ್ಯಾಟರ್‌ ರವೀಂದ್ರ ಮತ್ತು ಬಲಗೈ ಆಟಗಾರ ವಿಲಿಯಮ್ಸನ್ ಅವರ ಸಂಯೋಜನೆ  ದಕ್ಷಿಣ ಆಫ್ರಿಕಾ ಬೌಲರ್‌ಗಳ ಪಾಲಿಗೆ ತಲೆನೋವಾಯಿತು. ಇಬ್ಬರೂ ಆಕರ್ಷಕ ಹೊಡೆತಗಳನ್ನು ಆಡಿದರು. ಎರಡನೇ ವಿಕೆಟ್‌ಗೆ 164 ರನ್ ಸೇರಿಸಿ, ಕೊನೆಯ 10 ಓವರುಗಳಲ್ಲಿ ಉಳಿದ ಬ್ಯಾಟರ್‌ಗಳಿಗೆ ತೋಳೇರಿಸಲು ವೇದಿಕೆ ಸಿದ್ಧಪಡಿಸಿಕೊಟ್ಟರು.

ಆ ಕೆಲಸವನ್ನು ಡೇರಿಲ್‌ ಮಿಚೆಲ್ (49, 37 ಎಸೆತ), ಗ್ಲೆನ್‌ ಫಿಲಿಪ್ಸ್‌ (49, 27 ಎಸೆತ), ಮೈಕೆಲ್‌ ಬ್ರೇಸ್‌ವೆಲ್‌ (16, 12ಎ) ಪರಿಪೂರ್ಣವಾಗಿ ಮಾಡಿದರು. ಕೊನೆಯ ಹತ್ತು ಓವರುಗಳಲ್ಲಿ ನ್ಯೂಜಿಲೆಂಡ್ ತಂಡ 112 ರನ್ ಬಾಚಿಕೊಂಡಿತು. ಇವುಗಳಲ್ಲಿ 66 ರನ್‌ಗಳು ಕೊನೆಯ ಐದು ಓವರುಗಳಲ್ಲೇ ಹರಿದುಬಂದವು.

ಕಗಿಸೊ ರಬಾಡ ಬೌಲಿಂಗ್‌ನಲ್ಲಿ ಎರಡು ರನ್ ಗಳಿಸುವ ಮೂಲಕ ರವೀಂದ್ರ ಐದನೇ ಏಕದಿನ ಶತಕ ಪೂರೈಸಿದರು. ಈ ಎಲ್ಲ ಶತಕಗಳು ಐಸಿಸಿ ಟೂರ್ನಿಗಳಲ್ಲೇ ಬಂದಿರುವುದು ವಿಶೇಷ. ಈ ಟೂರ್ನಿಯಲ್ಲಿ ಅವರು ಬಾಂಗ್ಲಾದೇಶ ವಿರುದ್ಧವೂ ಶತಕ (112) ಬಾರಿಸಿದ್ದರು. ಭಾರತದಲ್ಲಿ 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅವರು ಮೂರು ಶತಕ ಹೊಡೆದಿದ್ದರು.

ಸಂಯಮದಿಂದ ಆಡಿದ ವಿಲಿಯಮ್ಸನ್‌ ಏಕದಿನ ಪಂದ್ಯಗಳಲ್ಲಿ ತಮ್ಮ 15ನೇ ಶತಕ ದಾಖಲಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಇದು ಅವರ ಸತತ ಮೂರನೇ ಶತಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.