ADVERTISEMENT

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: ಪೂಜಾರ ಹಿಂದಿಕ್ಕಿದ ಸ್ಟೀವನ್‌ ಸ್ಮಿತ್‌

ಪಿಟಿಐ
Published 6 ಆಗಸ್ಟ್ 2019, 12:23 IST
Last Updated 6 ಆಗಸ್ಟ್ 2019, 12:23 IST
ಸ್ಟೀವನ್‌ ಸ್ಮಿತ್‌ (ಎಡ) ಮತ್ತು ನೇಥನ್‌ ಲಯನ್‌
ಸ್ಟೀವನ್‌ ಸ್ಮಿತ್‌ (ಎಡ) ಮತ್ತು ನೇಥನ್‌ ಲಯನ್‌   

ದುಬೈ: ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌, ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ ಬಿಡುಗಡೆಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

ಈ ಹಾದಿಯಲ್ಲಿ ಭಾರತದ ಚೇತೇಶ್ವರ್‌ ಪೂಜಾರ ಅವರನ್ನು ಹಿಂದಿಕ್ಕಿದ್ದಾರೆ.

ಇಂಗ್ಲೆಂಡ್‌ ಎದುರಿನ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಸ್ಮಿತ್‌, ಎರಡು ಶತಕಗಳನ್ನು ದಾಖಲಿಸಿದ್ದರು. ಹೀಗಾಗಿ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿದಿತ್ತು. ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆ ಪೂರೈಸಿದ ಬಳಿಕ ಅವರು ಆಡಿದ ಮೊದಲ ಟೆಸ್ಟ್‌ ಇದಾಗಿತ್ತು.

ADVERTISEMENT

ಪ್ರಥಮ ಇನಿಂಗ್ಸ್‌ನಲ್ಲಿ 144ರನ್‌ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದ ಸ್ಮಿತ್‌, ಎರಡನೇ ಇನಿಂಗ್ಸ್‌ನಲ್ಲಿ 142ರನ್‌ ಕಲೆಹಾಕಿ ಆಸ್ಟ್ರೇಲಿಯಾವು ಬೃಹತ್‌ ಮೊತ್ತ ಪೇರಿಸಲು ನೆರವಾಗಿದ್ದರು.

ಒಟ್ಟು ರ‍್ಯಾಂಕಿಂಗ್‌ ಪಾಯಿಂಟ್ಸ್‌ ಅನ್ನು 900ಕ್ಕೆ ಹೆಚ್ಚಿಸಿಕೊಂಡಿರುವ ಸ್ಮಿತ್‌, ಒಂದು ಸ್ಥಾನ ಮೇಲೇರಿದ್ದಾರೆ.

ಭಾರತದ ವಿರಾಟ್‌ ಕೊಹ್ಲಿ (922 ಪಾ.) ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ ಆಟಗಾರ ಕೇನ್‌ ವಿಲಿಯಮ್ಸನ್‌ (913 ಪಾ.) ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್‌ ತಂಡದ ಬೆನ್‌ ಸ್ಟೋಕ್ಸ್‌ ಮತ್ತು ಕ್ರಿಸ್‌ ವೋಕ್ಸ್‌ ಅವರು ಕ್ರಮವಾಗಿ 69 ಮತ್ತು 70ನೇ ಸ್ಥಾನಗಳಿಗೆ ಜಿಗಿದಿದ್ದಾರೆ. ರೋರಿ ಬರ್ನ್ಸ್‌ 81ನೇ ಸ್ಥಾನಕ್ಕೇರಿದ್ದಾರೆ. ಅವರು 25 ಸ್ಥಾನಗಳಲ್ಲಿ ಪ್ರಗತಿ ಕಂಡಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್‌ ನೇಥನ್‌ ಲಯನ್‌ 13ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಇಂಗ್ಲೆಂಡ್‌ ಎದುರಿನ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ ಉರುಳಿಸಿದ್ದ ಅವರು ಒಟ್ಟು ಆರು ಸ್ಥಾನ ಏರಿಕೆ ಕಂಡಿದ್ದಾರೆ.

ಆಸ್ಟ್ರೇಲಿಯಾದ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌, ಅಗ್ರಪಟ್ಟ ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಇಂಗ್ಲೆಂಡ್‌ ಎದುರು ಒಟ್ಟು ಏಳು ವಿಕೆಟ್‌ ಉರುಳಿಸಿದ್ದ ಅವರು ಒಟ್ಟು ರ‍್ಯಾಂಕಿಂಗ್‌ ಪಾಯಿಂಟ್ಸ್‌ ಅನ್ನು 898ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಇದು ಅವರ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ.

ಇಂಗ್ಲೆಂಡ್‌ನ ವೇಗದ ಬೌಲರ್‌ ಸ್ಟುವರ್ಟ್‌ ಬ್ರಾಡ್‌ (16), ಕ್ರಿಸ್‌ ವೋಕ್ಸ್‌ (29) ಅವರೂ ಬಡ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.