ADVERTISEMENT

ಐಸಿಸಿ ಏಕದಿನ ರ‍್ಯಾಂಕಿಂಗ್‌: ಅಗ್ರ ಐವರು ಬ್ಯಾಟರ್‌ಗಳಲ್ಲಿ ಮೂವರು ಭಾರತೀಯರು

ಪಿಟಿಐ
Published 13 ಆಗಸ್ಟ್ 2025, 13:12 IST
Last Updated 13 ಆಗಸ್ಟ್ 2025, 13:12 IST
   

ದುಬೈ: ಐಸಿಸಿ ನೂತನ ಏಕದಿನ ರ‍್ಯಾಂಕಿಂಗ್‌ನ ಟಾಪ್‌ ಐವರು ಬ್ಯಾಟರ್‌ಗಳಲ್ಲಿ ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.

ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್‌ ಗಿಲ್‌ ಅವರು 784 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. 756 ರೇಟಿಂಗ್‌ ಪಾಯಿಂಟ್‌ಗಳೊಂದಿಗೆ ಏಕದಿನ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಎರಡನೇ ಸ್ಥಾನಕ್ಕೇರಿದ್ದಾರೆ. ಮಾಜಿ ನಾಯಕ ವಿರಾಟ್‌ ಕೊಹ್ಲಿ 736 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಐಸಿಸಿ ನೂತನ ಏಕದಿನ ರ‍್ಯಾಂಕಿಂಗ್‌ನಲ್ಲಿ 38 ವರ್ಷದ ರೋಹಿತ್‌ ಶರ್ಮಾ ಅವರು 2 ಸ್ಥಾನ ಮೇಲೇರಿದ್ದಾರೆ. ಐಪಿಎಲ್‌ 18ನೇ ಆವೃತ್ತಿ ನಂತರ ಅವರು ಕ್ರಿಕೆಟ್‌ ಅಂಗಳದಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಪಾಕಿಸ್ತಾನದ ಸ್ಟಾರ್‌ ಬ್ಯಾಟರ್‌ ಬಾಬರ್ ಆಜಂ ಅವರು ವೆಸ್ಟ್‌ ಇಂಡೀಸ್‌ ವಿರುದ್ದದ ಸರಣಿಯಲ್ಲಿ ನೀರಸ ಪ್ರದರ್ಶನ ತೋರಿದ್ದರಿಂದ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಹಾಗಾಗಿ ರೋಹಿತ್‌ ಅವರು ರ‍್ಯಾಂಕಿಂಗ್‌ನಲ್ಲಿ ಮೇಲೇರಿದ್ದಾರೆ.

ADVERTISEMENT

ಭಾರತದ ಸ್ಟಾರ್‌ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರು ಕೊನೆಯ ಬಾರಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅಂತರರಾಷ್ಟ್ರೀಯ ಏಕದಿನ ಪಂದ್ಯ ಆಡಿದ್ದರು. ಮುಂದಿನ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಏಕದಿನ ರ‍್ಯಾಂಕಿಂಗ್‌ನ ಟಾಪ್‌ 15ರಲ್ಲಿ ಭಾರತದ ಐವರು ಬ್ಯಾಟರ್‌ಗಳಿದ್ದಾರೆ. ಶ್ರೇಯಸ್‌ ಅಯ್ಯರ್‌ ಅವರು ಎಂಟನೇ ಸ್ಥಾನದಲ್ಲಿದ್ದರೆ, ಕೆ.ಎಲ್‌. ರಾಹುಲ್‌ ಅವರು 15ನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಕುಲದೀಪ್‌ ಯಾದವ್‌ ಅವರು ಎರಡನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜ ಅವರು ಒಂಬತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.