ADVERTISEMENT

ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರ: ಬಿಸಿಬಿ ಮನವಿ ತಿರಸ್ಕರಿಸಿದ ಐಸಿಸಿ

ಏಜೆನ್ಸೀಸ್
Published 21 ಜನವರಿ 2026, 16:14 IST
Last Updated 21 ಜನವರಿ 2026, 16:14 IST
ಐಸಿಸಿ ಲಾಂಛನ
ಐಸಿಸಿ ಲಾಂಛನ   

ದುಬೈ: ಭಾರತದಲ್ಲಿ ನಿಗದಿಯಾಗಿರುವ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ ಬುಧವಾರ ತಿರಸ್ಕರಿಸಿದೆ.

ಟೂರ್ನಿ ನಡೆಯುವ ಭಾರತದ ಯಾವುದೇ ತಾಣದಲ್ಲಿ ಬಾಂಗ್ಲಾದೇಶದ ಆಟಗಾರರು, ಅಧಿಕಾರಿಗಳು ಮತ್ತು ಅಭಿಮಾನಿಗಳ ಸುರಕ್ಷತೆಗೆ ಸಂಬಂಧಿಸಿ ಆತಂಕಕಾರಿ ಸ್ಥಿತಿಯಿದೆ ಎಂಬುದನ್ನು ವಿಶ್ವಾಸದಿಂದ ಹೇಳುವ ಹಾಗಿಲ್ಲ. ಹೀಗಾಗಿ ಪಂದ್ಯಗಳು ಪೂರ್ವನಿಗದಿಯಂತೆ ನಡೆಯಲಿವೆ ಎಂದು ಅದು ಹೇಳಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು ಆಟಗಾರರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತದಲ್ಲಿನ ತನ್ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದ ಕಾರಣ ಈ ಸಭೆ ಕರೆಯಲಾಗಿತ್ತು.

ADVERTISEMENT

‘ಸದ್ಯದ ಪರಿಸ್ಥಿತಿಯಲ್ಲಿ ಪಂದ್ಯಗಳ ಮರುನಿಯೋಜನೆ ಮಾಡಿದಲ್ಲಿ ಇದು ಐಸಿಸಿ ಟೂರ್ನಿಗಳ ಪಾವಿತ್ರ್ಯತೆಗೆ ಧಕ್ಕೆ ತರಬಲ್ಲದು. ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ ನಿಷ್ಪಕ್ಷಪಾತ ನಿಲುವಿಗೂ ಭಂಗ ತರಲಿದೆ’ ಎಂದು ಹೇಳಿಕೆಯಲ್ಲಿ ಐಸಿಸಿ ತಿಳಿಸಿದೆ.

ಪಾಕ್ ಬೆಂಬಲ:

ಮತದಾನದ ವೇಳೆ 16 ಸದಸ್ಯರಲ್ಲಿ 14 ರಾಷ್ಟ್ರಗಳು ಬಿಸಿಬಿಯ ಮನವಿಗೆ ವಿರುದ್ಧವಾಗಿ ಮತಹಾಕಿದವು. ಅಂತಿಮ ನಿರ್ಧಾರ ಕೈಗೊಳ್ಳಲು ಐಸಿಸಿ, ಬಾಂಗ್ಲಾದೇಶಕ್ಕೆ ಇನ್ನೂ ಒಂದು ದಿನದ ಗಡುವು ನೀಡಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

‘ಐಸಿಸಿ ಸದಸ್ಯ ರಾಷ್ಟ್ರಗಳ ಪೈಕಿ, ಪಂದ್ಯಗಳ ಸ್ಥಳಾಂತರ ಮನವಿಯ ಪರವಾಗಿ ಬಿಸಿಬಿ ಮತ್ತು ಪಾಕಿಸ್ತಾನ ಮತಹಾಕಿದವು. ಬಾಂಗ್ಲಾದೇಶಕ್ಕೆ ಅಂತಿಮ ನಿರ್ಧಾರಕ್ಕೆ ಬರಲು ಜನವರಿ 21ರಂದು ಗಡುವು ನೀಡಲಾಗಿತ್ತು. ಇದೀಗ ಐಸಿಸಿ ಮಂಡಳಿಯು ಬಿಸಿಬಿಗೆ ತೀರ್ಮಾನಕ್ಕೆ ಬರಲು ಇನ್ನೊಂದು ದಿನ ನೀಡಿದೆ’ ಎಂದೂ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.