ADVERTISEMENT

T20 WC: ದ.ಆಫ್ರಿಕಾ ವಿರುದ್ಧ ಆಸೀಸ್‌ಗೆ ರೋಚಕ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2021, 13:52 IST
Last Updated 23 ಅಕ್ಟೋಬರ್ 2021, 13:52 IST
ಆಸ್ಟ್ರೇಲಿಯಾ ಶುಭಾರಂಭ
ಆಸ್ಟ್ರೇಲಿಯಾ ಶುಭಾರಂಭ   

ಅಬುಧಾಬಿ: ಐಸಿಸಿ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ನಡೆದ 'ಸೂಪರ್ 12' ಹಂತದ ಒಂದನೇ ಗುಂಪಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಗೆಲುವಿನ ಶುಭಾರಂಭ ಮಾಡಿಕೊಂಡಿದ್ದು, ಎರಡು ಅಂಕ ಕಲೆ ಹಾಕಿದೆ. ಅತ್ತ ದಕ್ಷಿಣ ಆಫ್ರಿಕಾ ಗೆಲುವಿನ ಅಂಚಿನಲ್ಲಿ ಎಡವಿದೆ. 119 ರನ್ ಗುರಿಯನ್ನು ಆಸೀಸ್ ಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸುಲಭ ಗುರಿ ಬೆನ್ನತ್ತಿದ ಆಸೀಸ್ ಆರಂಭ ಉತ್ತಮವಾಗಿರಲಿಲ್ಲ. ಖಾತೆ ತೆರೆಯುವ ಮುನ್ನವೇ ನಾಯಕ ಆ್ಯರನ್ ಫಿಂಚ್ ಔಟ್ ಆದರು. ಡೇವಿಡ್ ವಾರ್ನರ್ (14) ಹಾಗೂ ಮಿಚೆಲ್ ಮಾರ್ಶ್‌ಗೆ (11) ಮಿಂಚಲು ಸಾಧ್ಯವಾಗಲಿಲ್ಲ.

ಸ್ಟೀವ್ ಸ್ಮಿತ್ (35) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (18) ಉಪಯುಕ್ತಇನ್ನಿಂಗ್ಸ್ ಕಟ್ಟಿದರೂ ಕೊನೆಯ ಹಂತದಲ್ಲಿ ಔಟ್ ಆಗಿರುವುದು ಹಿನ್ನಡೆಯಾಗಿ ಪರಿಣಮಿಸಿತು. ಈ ಮೂಲಕ 81 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು.

ಅಂತಿಮ ಹಂತದಲ್ಲಿ ಪಂದ್ಯ ರೋಚಕ ಹಂತವನ್ನು ತಲುಪಿತು. ಆದರೆ ಮುರಿಯದ ಆರನೇ ವಿಕೆಟ್‌ಗೆ 40 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದ ಮಾರ್ಕಸ್ ಸ್ಟೋಯಿನಿಸ್‌ (24*) ಹಾಗೂ ಮ್ಯಾಥ್ಯೂ ವೇಡ್‌ (15*) ತಂಡವನ್ನು ಗೆಲುವಿನ ದಡ ಸೇರಿಸಿದರು. ದಕ್ಷಿಣ ಆಫ್ರಿಕಾ ಪರ ಏನ್ರಿಚ್ ನಾರ್ಕಿಯ ಎರಡು ವಿಕೆಟ್ ಕಬಳಿಸಿದರು.

ಈ ಮೊದಲು ಟಾಸ್ ಗೆದ್ದ ಆಸೀಸ್ ನಾಯಕ ಆ್ಯರನ್ ಫಿಂಚ್ ಮೊದಲು ಕ್ಷೇತ್ರರಕ್ಷಣೆ ಆಯ್ದುಕೊಂಡರು. ನಾಯಕನ ನಿರ್ಧಾರ ಸರಿಯೆಂದು ಸಾಬೀತು ಮಾಡಿದ ಬೌಲರ್‌ಗಳು ದಕ್ಷಿಣ ಆಫ್ರಿಕಾವನ್ನು ಅಲ್ಪ ಮೊತ್ತಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ಏಡನ್ ಮರ್ಕರಮ್ (40) ಹೊರತುಪಡಿಸಿ ಇತರೆ ಯಾವ ಬ್ಯಾಟರ್ ಹೋರಾಟದ ಮನೋಭಾವವನ್ನು ತೋರಲೇ ಇಲ್ಲ. ನಾಯಕ ತೆಂಬಾ ಬವುಮ 12, ಹೆನ್ರಿಚ್ ಕ್ಲಾಸೆನ್ 13 ಹಾಗೂ ಡೇವಿಡ್ ಮಿಲ್ಲರ್ 16 ರನ್ ಗಳಿಸಿದರು. ಕೊನೆಯ ಹಂತದಲ್ಲಿ ಕಗಿಸೊ ರಬಾಡ 19 ರನ್ ಗಳಿಸಿ ಔಟಾಗದೆ ಉಳಿದರು.

ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 118 ರನ್ ಗಳಿಸಲಷ್ಟೇ ಸಮರ್ಥವಾಯಿತು. ಆಸೀಸ್ ಪರ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಹಾಗೂ ಆ್ಯಡಂ ಜಂಪಾ ತಲಾ ಎರಡು ವಿಕೆಟ್‌‌ಗಳನ್ನು ಹಂಚಿಕೊಂಡರು.

ಇದು ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದಿಂದ ದಾಖಲಾದ ಎರಡನೇ ಅತಿ ಕನಿಷ್ಠ ಮೊತ್ತವಾಗಿದೆ. ಈ ಹಿಂದೆ 2007ರ ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಒಂಬತ್ತು ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.