ಕುಲದೀಪ್ ಯಾದವ್
ದುಬೈ: ದೆಹಲಿಯಲ್ಲಿ ನಿನ್ನೆ (ಅಕ್ಟೋಬರ್ 14) ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಪಿನ್ನರ್ ಕುಲದೀಪ್ ಯಾದವ್ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಪುರುಷರ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ 14ನೇ ಸ್ಥಾನಕ್ಕೇರಿದ್ದಾರೆ.
ಈ ಪಂದ್ಯಕ್ಕೂ ಮೊದಲು ಕುಲದೀಪ್ ಯಾದವ್ ಅವರು 21ನೇ ಸ್ಥಾನದಲ್ಲಿದ್ದರು. ವಿಂಡೀಸ್ ವಿರುದ್ಧ ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದಕ್ಕಾಗಿ 14ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ಕ್ರಿಕೆಟ್ ವೃತ್ತಿ ಜೀವನದ ಅತ್ಯುತ್ತಮ ಸಾಧನೆಯಾಗಿದೆ. ಮಾತ್ರವಲ್ಲ, ಎರಡನೇ ಪಂದ್ಯದಲ್ಲಿ ಅವರು ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡರು.
ಇನ್ನು, ವಿಂಡೀಸ್ ವಿರುದ್ಧದ 2ನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 175 ರನ್ ಗಳಿಸಿದ್ದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 2 ಸ್ಥಾನ ಬಡ್ತಿ ಪಡೆದು ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಕೆ.ಎಲ್. ರಾಹುಲ್ ಕೂಡ ಎರಡು ಸ್ಥಾನ ಬಡ್ತಿ ಪಡೆದು 33ನೇ ಸ್ಥಾನಕ್ಕೆ ತಲುಪಿದ್ದಾರೆ.
ಏಕದಿನದಲ್ಲಿ ರಶೀದ್ ನಂ.1 ಬೌಲರ್
ಅಬುಧಾಬಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಸರಣಿಯಲ್ಲಿ ಅಫ್ಘಾನಿಸ್ತಾನ ತಂಡ 3-0 ಅಂತರದಲ್ಲಿ ಗೆಲ್ಲಲು ಸಹಕಾರಿಯಾಗಿದ್ದ ಸ್ಪಿನ್ನರ್ ರಶೀದ್ ಖಾನ್ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಇನ್ನೂ ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಫ್ಘಾನಿಸ್ತಾನದ ಬ್ಯಾಟರ್ ಇಬ್ರಾಹಿಂ ಜದ್ರಾನ್ 8 ಸ್ಥಾನಗಳ ಜಿಗಿತ ಕಂಡು ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಸದ್ಯ ಅವರು ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ಯಾವುದೇ ಅಫ್ಘಾನಿಸ್ತಾನದ ಬ್ಯಾಟರ್ ಈ ಸ್ಥಾನ ಪಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.