ADVERTISEMENT

ICC Womens World Cup: ಭಾರತಕ್ಕೆ ಅಜೇಯ ಆಸ್ಟ್ರೇಲಿಯಾದ ಸವಾಲು

ಮಿಥಾಲಿ ಬಳಗಕ್ಕೆ ಬ್ಯಾಟಿಂಗ್ ಚಿಂತೆ: ಸ್ಮೃತಿ, ಹರ್ಮನ್‌ ಮೇಲೆ ನಿರೀಕ್ಷೆಯ ಭಾರ

ಪಿಟಿಐ
Published 18 ಮಾರ್ಚ್ 2022, 17:57 IST
Last Updated 18 ಮಾರ್ಚ್ 2022, 17:57 IST
ನ್ಯೂಜಿಲೆಂಡ್‌ನಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಶುಕ್ರವಾರ ಹೋಳಿ ಹಬ್ಬದ ಸಂಭ್ರಮ ಆಚರಿಸಿದರು  –ಟ್ವಿಟರ್ ಚಿತ್ರ
ನ್ಯೂಜಿಲೆಂಡ್‌ನಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಶುಕ್ರವಾರ ಹೋಳಿ ಹಬ್ಬದ ಸಂಭ್ರಮ ಆಚರಿಸಿದರು  –ಟ್ವಿಟರ್ ಚಿತ್ರ   

ಆಕ್ಲೆಂಡ್: ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಇದುವರೆಗೆ ಸಿಹಿ–ಕಹಿ ಎರಡನ್ನೂ ಅನುಭವಿಸಿದೆ.

ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆದ್ದು, ಇನ್ನೆರಡರಲ್ಲಿ ಸೋತಿರುವ ತಂಡವು ಇನ್ನೂ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಉಳಿಸಿಕೊಂಡಿದೆ. ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ಎಡವಿದರೆ ಲೀಗ್ ಹಂತದಿಂದಲೇ ಹೊರಬೀಳುವ ಅಪಾಯವಿದೆ. ಆದ್ದರಿಂದ ಶನಿವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯದ ಹಾದಿಗೆ ಮರಳುವ ಒತ್ತಡದಲ್ಲಿ ಭಾರತದ ವನಿತೆಯರು ಇದ್ದಾರೆ.

ಪಾಯಿಂಟ್ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಭಾರತ ತಂಡವು ಇನ್ನೆರಡು ಪಂದ್ಯಗಳಲ್ಲಿ ಗೆದ್ದರೆ ನಿರಾಳವಾಗಬಹುದು. ಅಗ್ರ ನಾಲ್ಕರಲ್ಲಿ ಸ್ಘಾನ ಗಳಿಸಬಹುದು.

ADVERTISEMENT

‘ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ನಮ್ಮ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡುವುದು ಖಚಿತ. ಬೌಲಿಂಗ್ ಪಡೆಯು ತನ್ನ ಅಮೋಘ ಆಟವನ್ನು ಈ ಪಂದ್ಯದಲ್ಲಿಯೂ ಮುಂದುವರಿಸಲಿದೆ’ ಎಂದು ತಂಡದ ಆಟಗಾರ್ತಿ ಸ್ಮೃತಿ ಮಂದಾನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮತ್ತು ಹರ್ಮನ್‌ಪ್ರೀತ್ ಕೌರ್ ಶತಕ ಸಿಡಿಸಿದ್ದರು. ಟೂರ್ನಿಯಲ್ಲಿ ಇವರಿಬ್ಬರೂ ಕ್ರಮವಾಗಿ 216 ಮತ್ತು 199 ರನ್‌ಗಳನ್ನು ಗಳಿಸಿದ್ದಾರೆ. ಆದರೆ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಪಡೆ ವಿಫಲವಾಗಿತ್ತು. ಬೌಲಿಂಗ್‌ನಲ್ಲಿ ಮೇಘನಾ ಸಿಂಗ್ ಮತ್ತು ಅನುಭವಿ ಜೂಲನ್ ಗೋಸ್ವಾಮಿ ಅವರು ಉತ್ತಮ ಲಯದಲ್ಲಿದ್ದು, ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಭರವಸೆ ಇದೆ. ಅವರೊಂದಿಗೆ ರಾಜೇಶ್ವರಿ ಗಾಯಕವಾಡ್ ಮತ್ತು ಪೂಜಾ ವಸ್ತ್ರಕರ್ ಕೂಡ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಬೌಲಿಂಗ್ ಮಾಡಿದರೆ ಆಸ್ಟ್ರೇಲಿಯಾಕ್ಕೆ ಕಠಿಣ ಸವಾಲೊಡ್ಡಬಹುದು.

ಮೆಗ್ ಲ್ಯಾನಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಆಡಿರುವ ನಾಲ್ಕು ಪಂದ್ಯಗಳಲ್ಲಿಯೂ ಜಯಸಾಧಿಸಿದೆ. ಬ್ಯಾಟರ್ ರಚೆಲ್ ಹೇನ್ಸ್‌ ಒಟ್ಟು 277 ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ವೇಗದ ಬೌಲರ್ ಎಲೈಸಾ ಪೆರಿ ಮತ್ತು ಸ್ಪಿನ್ನರ್ ಆ್ಯಶ್ಲಿ ಗಾರ್ಡನರ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತದ ಬ್ಯಾಟರ್‌ಗಳಿಗೆ ಇವರಿಬ್ಬರೂ ಕಠಿಣ ಸವಾಲೊಡ್ಡುವ ಸಮರ್ಥ ಬೌಲರ್‌ಗಳಾಗಿದ್ದಾರೆ.

ತಂಡಗಳು
ಭಾರತ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಯಷ್ಟಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ಸ್ನೇಹಾ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತಾನಿಯಾ ಭಾಟಿಯಾ (ವಿಕೆಟ್‌ಕೀಪರ್), ರಾಜೇಶ್ವರಿ ಗಾಯಕವಾಡ್, ಪೂನಮ್ ಯಾದವ್

ಆಸ್ಟ್ರೇಲಿಯಾ: ಮೆಗ್ ಲ್ಯಾನಿಂಗ್ (ನಾಯಕಿ), ರಚೆಲ್ ಹೇನ್ಸ್ (ಉಪನಾಯಕಿ), ಡಾರ್ಸಿ ಬ್ರೌನ್, ನಿಕ್ ಕ್ಯಾರಿ, ಆ್ಯಶ್ಲಿ ಗಾರ್ಡನರ್, ಗ್ರೇಸ್ ಹ್ಯಾರಿಸ್, ಅಲೈಸಾ ಹೀಲಿ, ಜೆಸ್ ಜಾನ್ಸನ್, ಅಲ್ನಾ ಕಿಂಗ್, ತಹಿಲಾ ಮೆಕ್‌ಗ್ರಾ, ಬೆತ್ ಮೂನಿ, ಎಲೈಸ್ ಪೆರಿ, ಮೆಘನ್ ಶೂಟ್, ಅನಾಬೆಲ್ ಸದರ್ಲೆಂಡ್, ಅಮಂದಾ ಜೇಡ್ ವೆಲಿಂಗ್ಟನ್

ಪಂದ್ಯ ಆರಂಭ: ಬೆಳಿಗ್ಗೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.