
ವಿಶ್ವಕಪ್ ಟ್ರೋಫಿಯೊಂದಿಗೆ ಸಂಭ್ರಮಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ
ಪಿಟಿಐ ಚಿತ್ರ
ನವಿ ಮುಂಬೈ: ಮಹಿಳಾ ಕ್ರಿಕೆಟ್ ರಂಗದಲ್ಲಿ ಭಾನುವಾರ ಹೊಸ ಶಕೆ ಆರಂಭವಾಯಿತು. ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಭಾರತ ತಂಡವು ಮೊದಲ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡು ಚಾರಿತ್ರಿಕ ಸಾಧನೆ ಮೆರೆಯಿತು. ಹಲವು ವರ್ಷಗಳಿಂದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಂಡಿದ್ದ ಕನಸು ನನಸಾಯಿತು. ಹರ್ಮನ್ ಪ್ರೀತ್ ಕೌರ್ ಬಳಗದ ಆಟಗಾರ್ತಿಯರು ಹರ್ಷದ ಹೊನಲಲ್ಲಿ ತೇಲಿದರು.
2005 ಮತ್ತು 2017ರ ಟೂರ್ನಿಗಳಲ್ಲಿ ಫೈನಲ್‌ನಲ್ಲಿ ಎಡವಿದ್ದ ಭಾರತ ತಂಡ ಈ ಬಾರಿ ಗುರಿ ತಪ್ಪಲಿಲ್ಲ. ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ಅವರ ಆಲ್‌ರೌಂಡ್ ಆಟದ ಬಲದಿಂದ ಭಾರತವು 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ವನಿತೆಯರ ಎದುರು ಜಯಭೇರಿ ಬಾರಿಸಿತು. ದಕ್ಷಿಣ ಆಫ್ರಿಕಾ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಜಯಿಸುವ ಅವಕಾಶ ಕೈತಪ್ಪಿತು. ಆದರೆ ತಂಡದ ನಾಯಕಿ ಲಾರಾ ವೋಲ್ವಾರ್ಟ್ (101; 98ಎಸೆತ; 6X1, 4X11) ಅವರ ಅಮೋಘ ಶತಕವು ಇತಿಹಾಸದ ಪುಟ ಸೇರಿತು. ಅವರ ಬಳಗದ ದಿಟ್ಟ ಹೋರಾಟವೂ ಮನಗೆದ್ದಿತು.
ಮಧ್ಯಾಹ್ನ ಸುರಿದ ಮಳೆಯಿಂದಾಗಿ ಪಂದ್ಯವು ಎರಡು ತಾಸು ವಿಳಂಬವಾಗಿ ಆರಂಭವಾಯಿತು. ಶಫಾಲಿ ವರ್ಮಾ (87; 78ಎ, 4X7, 6X2) ಮತ್ತು ದೀಪ್ತಿ ಶರ್ಮಾ (58; 58ಎಸೆತ, 4X3, 6X1) ಅವರ ಅರ್ಧಶತಕಗಳ ಬಲದಿಂದ ಭಾರತ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 298 ರನ್ ಗಳಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿಹಾಕುವಲ್ಲಿಯೂ ದೀಪ್ತಿ (39ಕ್ಕೆ5) ಮತ್ತು ಶಫಾಲಿ (36ಕ್ಕೆ2) ತಮ್ಮ ಸ್ಪಿನ್ ಕೈಚಳಕವನ್ನೂ ತೋರಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ 45.3 ಓವರ್‌ಗಳಲ್ಲಿ 246 ಗಳಿಸಲಷ್ಟೇ ಸಾಧ್ಯವಾಯಿತು.
ಏಳು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್ ನಲ್ಲಿ ಸೋಲಿಸಿದ್ದ ಭಾರತ ಮತ್ತು ನಾಲ್ಕು ಸಲ ಕಿರೀಟ ಧರಿಸಿದ್ದ ಇಂಗ್ಲೆಂಡ್ ತಂಡ ವನ್ನು ಮಣಿಸಿದ್ದ ದಕ್ಷಿಣ ಆಫ್ರಿಕಾ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದವು.
1983ರಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ಪುರುಷರ ತಂಡವು ಮೊದಲ ಬಾರಿಗೆ ವಿಶ್ವಕಪ್ ಜಯಿಸಿತ್ತು. ಅದರ ನಂತರ ಭಾರತದ ಕ್ರಿಕೆಟ್ ಬೆಳೆದ ರೀತಿ ಅಗಾಧವಾದದ್ದು. ಇದೀಗ ಚೊಚ್ಚಲ ಪ್ರಶಸ್ತಿ ಜಯಿಸಿರುವ ಹರ್ಮನ್ ಬಳಗವು ಕೂಡ ಹೊಸ ಇತಿಹಾಸ ಬರೆದಿದೆ. ಭವ್ಯ ಭವಿಷ್ಯದ ಕನಸು ಗರಿಗೆದರಿದೆ.
ಟೂರ್ನಿಯಲ್ಲಿ ಸಂಘಟಿತ ಪ್ರದರ್ಶನ ತೋರಿದ ನಮ್ಮ ಆಟಗಾರ್ತಿಯರಿಗೆ ಅಭಿನಂದನೆಗಳು. ಈ ಐತಿಹಾಸಿಕ ವಿಜಯವು ದೇಶದ ಭವಿಷ್ಯದ ಚಾಂಪಿಯನ್‌ಗಳಿಗೆ ಸ್ಫೂರ್ತಿ ತುಂಬಲಿದೆನರೇಂದ್ರ ಮೋದಿ ಪ್ರಧಾನ ಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.