ADVERTISEMENT

Womens WC: ಬೆತ್ ಮೂನಿ ಶತಕ, ಆಸೀಸ್‌ಗೆ ಜಯ; ಪಾಕ್‌ಗೆ 'ಹ್ಯಾಟ್ರಿಕ್' ಸೋಲು

ಪಿಟಿಐ
Published 8 ಅಕ್ಟೋಬರ್ 2025, 16:15 IST
Last Updated 8 ಅಕ್ಟೋಬರ್ 2025, 16:15 IST
<div class="paragraphs"><p>ಬೆತ್ ಮೂನಿ</p></div>

ಬೆತ್ ಮೂನಿ

   

ಐಸಿಸಿ ಚಿತ್ರ

ಕೊಲಂಬೊ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ವನಿತೆಯರು ಬುಧವಾರ ಪಾಕಿಸ್ತಾನ ಎದುರು 76 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ದಿಟ್ಟ ಹೋರಾಟ ಮಾಡಿದ ಬೆತ್ ಮೂನಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ ಕಾರಣರಾದರು.

ADVERTISEMENT

ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ 107ರನ್‌ಗಳಿಂದ ಗೆದ್ದಿತು. ಟೂರ್ನಿಯಲ್ಲಿ ಮೂರನೇ ಪಂದ್ಯ ಆಡಿದ ಆಸ್ಟ್ರೇಲಿಯಾ ಎರಡನೇ ಗೆಲುವು ಸಾಧಿಸಿತು. ಶ್ರೀಲಂಕಾ ಎದುರಿನ ಪಂದ್ಯ ಮಳೆಗೆ ರದ್ದಾಗಿತ್ತು.

ಪಾಕಿಸ್ತಾನ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೌಲರ್‌ಗಳು ಪಾಕ್ ತಂಡಕ್ಕೆ ಅಮೋಘ ಆರಂಭ ನೀಡಿದರು. ನಾಯಕಿ ಸನಾ ಫಾತೀಮಾ (49ಕ್ಕೆ2) ಮತ್ತು ನಷ್ರಾ ಸಂಧು (37ಕ್ಕೆ3) ಚುರುಕಾದ ದಾಳಿ ನಡೆಸಿದರು. ಇದರಿಂದಾಗಿ ಆಸ್ಟ್ರೇಲಿಯಾ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಅತಂಕದಲ್ಲಿತ್ತು.

ಆದರೆ, ನಾಲ್ಕನೇ ಕ್ರಮಾಂಕದ ಬ್ಯಾಟರ್ ಮೂನಿ (109; 114ಎ, 4X11) ಅವರು ಒಂದೆಡೆ ವಿಕೆಟ್ ಉರುಳುತ್ತಿದ್ದರೂ ದಿಟ್ಟತನದಿಂದ ಆಡಿದರು. 9ನೇ ವಿಕೆಟ್ ಜೊತೆಯಾಟದಲ್ಲಿ ಅವರಿಗೆ ಅಲೆನಾ ಕಿಂಗ್‌ (ಅಜೇಯ 51; 49ಎ, 4X3, 6X3) ಅವರು ಜೊತೆ ನೀಡಿದರು. ಇಬ್ಬರೂ ಸೇರಿ 106 ರನ್‌ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 221 ರನ್‌ ಗಳಿಸಿತು. ಇದಕ್ಕುತ್ತರವಾಗಿ ಪಾಕ್ ತಂಡವು 36.3 ಓವರ್‌ಗಳಲ್ಲಿ 114 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಅಲಿಸಾ ಹೀಲಿ (20; 23ಎ) ಮತ್ತು ಫೋಬಿ ಲಿಚ್‌ಫೀಲ್ಡ್‌ (10; 22ಎ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 30 ರನ್‌ ಗಳಿಸಿದರು. ಏಳನೇ ಓವರ್‌ನಲ್ಲಿ ಹೀಲಿ ಅವರ ವಿಕೆಟ್ ಗಳಿಸಿದ ಸಾದಿಯಾ ಇಕ್ಬಾಲ್ ಪಾಕ್ ತಂಡದ ಖಾತೆ ತೆರೆಯಲು ಕಾರಣರಾದರು. ನಂತರ ಸನಾ ಮತ್ತು ಸಂಧು ಅವರು ಪ್ರಮುಖ ಬ್ಯಾಟರ್‌ಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ರಮೀನ್ ಶಮೀಮ್ (29ಕ್ಕೆ2) ಕೂಡ ಉತ್ತಮ ಜೊತೆ ನೀಡಿದರು.

ಆದರೆ ಪೂರ್ಣ ಏಕಾಗ್ರತೆಯೊಂದಿಗೆ ಬ್ಯಾಟಿಂಗ್ ಮಾಡಿದ ಮೂನಿ ಯಾವುದೇ ಹಂತದಲ್ಲಿಯೂ ವಿಚಲಿತರಾಗಲಿಲ್ಲ. ಕವರ್ ಡ್ರೈವ್, ನೇರ ಹೊಡೆತಗಳು ಮತ್ತು ಸ್ವೀಪ್‌ಗಳ ಮೂಲಕ ರನ್ ಸೂರೆ ಮಾಡಿದರು. ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಪ್ರಥಮ ಹಾಗೂ ಒಟ್ಟಾರೆ ಏಕದಿನ ಕ್ರಿಕೆಟ್‌ನಲ್ಲಿ ಐದನೇ ಶತಕ ದಾಖಲಿಸಿದರು.

ಗುರಿ ಬೆನ್ನಟ್ಟಿದ ಪಾಕ್ ತಂಡವು ಆರಂಭದಲ್ಲಿಯೇ ಎಡವಿತು. ಕಿಮ್ ಗಾರ್ಥ್ ಮತ್ತು ಮೇಗನ್ ಶುಟ್ ಅವರ ಬೌಲಿಂಗ್ ಮುಂದೆ ಕುಸಿಯಿತು. ಇದರಿಂದಾಗಿ 86 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡ ಪಾಕ್ ಸೋಲಿನತ್ತ ಸಾಗಿತ್ತು.

ಸಿದ್ರಾ ಅಮಿನ್ (35; 52ಎ, 4X5) ಅವರೊಬ್ಬರೇ ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದರು. ಆದರೆ ಉಳಿದ ಬ್ಯಾಟರ್‌ಗಳು ವಿಫಲರಾದರು.

ಎಂಟನೇ ಕ್ರಮಾಂಕದ ರಮೀನ್ ಶಮೀಮ್ ಮತ್ತು ಹತ್ತನೇ ಬ್ಯಾಟರ್ ನಷ್ರಾ ಸಂಧು ಒಂದಿಷ್ಟು ಹೋರಾಟ ನಡೆಸಿದರು. ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಸಂಕ್ಷಿಪ್ತ ಸ್ಕೋರು:

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 9ಕ್ಕೆ221 (ಅಲಿಸಾ ಹೀಲಿ 20, ಬೆತ್ ಮೂನಿ 109, ಅಲೆನಾ ಕಿಂಗ್ ಔಟಾಗದೇ 51, ಫಾತೀಮಾ ಸನಾ 49ಕ್ಕೆ2, ರಮೀನ್ ಶಮೀಮ್ 29ಕ್ಕೆ2, ನಷ್ರಾ ಸಂಧು 37ಕ್ಕೆ3)

ಪಾಕಿಸ್ತಾನ: 36.3 ಓವರ್‌ಗಳಲ್ಲಿ 114 (ಸಿದ್ರಾ ಅಮಿನ್ 35, ರಮೀನ್ ಶಮೀಮ್ 15, ನಷ್ರಾ ಸಂಧು 11, ಕಿಮ್ ಗಾರ್ಥ್ 14ಕ್ಕೆ3, ಮೆಗನ್ ಶುಟ್ 25ಕ್ಕೆ2, ಅನಾಬೆಲ್ ಸದರ್ಲೆಂಡ್ 15ಕ್ಕೆ2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 107 ರನ್‌ಗಳ ಜಯ.

ಪಂದ್ಯದ ಆಟಗಾರ್ತಿ: ಬೆತ್ ಮೂನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.