ದುಬೈ: ಮುಂಬರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ನರು ಟೂರ್ನಿಯ ಇತಿಹಾಸದದಲ್ಲೇ ಅತ್ಯಧಿಕ ಮೊತ್ತದ ಬಹುಮಾನ ಮೊತ್ತ ಗಳಿಸಲಿದ್ದಾರೆ. ವಿಜೇತರಿಗೆ ನೀಡುವ ಬಹುಮಾನದ ಹಣವನ್ನು ₹11.65 ಕೋಟಿಯಿಂದ ₹39.55 ಕೋಟಿಗೆ ಏರಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೋಮವಾರ ಪ್ರಕಟಿಸಿದೆ.
2023ರ ಪುರುಷರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡ ₹31.35 ಕೋಟಿ ಗಳಿಸಿತ್ತು.
ಮಹಿಳಾ ವಿಶ್ವಕಪ್‌ನ 13ನೇ ಆವೃತ್ತಿ ಸೆಪ್ಟೆಂಬರ್ 30ರಂದು ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಿವೆ. ಎಂಟು ತಂಡಗಳು ಕಣದಲ್ಲಿರುವ ಈ ಟೂರ್ನಿಯ ಬಹುಮಾನ ಮೊತ್ತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ಈ ಬಾರಿ ಟೂರ್ನಿಯ ಒಟ್ಟು ಬಹುಮಾನ ಮೊತ್ತ ₹122.5 ಕೋಟಿ ($13.88 ದಶಲಕ್ಷ). ಇದು ನ್ಯೂಜಿಲೆಂಡ್‌ನಲ್ಲಿ ಕಳೆದ ಬಾರಿಯ (2022ರ) ಆವೃತ್ತಿಗೆ ಹೋಲಿಸಿದರೆ ಶೇ 297ರಷ್ಟು ಅಧಿಕ. ಈ ಏರಿಕೆಯು 2023ರ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತ (ಸುಮಾರು ₹88.26 ಕೋಟಿ) ಮೀರಿಸಿದೆ ಎಂದು ಐಸಿಸಿ ವಿವರಿಸಿದೆ.
ರನ್ನರ್ ಅಪ್ ಸ್ಥಾನ ಪಡೆಯುವ ತಂಡ ₹19.77 ಕೋಟಿ ಮೊತ್ತ ($2.24 ದಶಲಕ್ಷ) ಸಂಪಾದಿಸಲಿದೆ. ಇದು ಕಳೆದ ಬಾರಿಯ ಮೊತ್ತವಾದ ₹5.30 ಕೋಟಿಗೆ ಹೋಲಿಸಿದಲ್ಲಿ ಶೇ 273ರಷ್ಟು ಬೆಚ್ಚು.
ಸೆಮಿಫೈನಲ್‌ನಲ್ಲಿ ಸೋತ ತಂಡಗಳು ₹9.89 ಕೋಟಿ ಮೊತ್ತ ತಮ್ಮದಾಗಿಸಿಕೊಳ್ಳಲಿವೆ. 2022ರಲ್ಲಿ ಸೆಮಿಫೈನಲ್‌ನಲ್ಲಿ ಸೋತ ತಂಡಗಳು ಪಡೆದ ಬಹುಮಾನ ಮೊತ್ತ ₹2.65 ಕೋಟಿ.
ಗುಂಪು ಹಂತದಲ್ಲಿ ಗೆಲ್ಲುವ ತಂಡಗಳು ₹30.29 ಲಕ್ಷ ಸಂಪಾದಿಸಲಿವೆ. ಐದು ಮತ್ತು ಆರನೇ ಸ್ಥಾನ ಪಡೆಯುವ ತಂಡಗಳಿಗೆ ₹62 ಲಕ್ಷ ದೊರೆಯಲಿದೆ. ಏಳು ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳು ₹24.71 ಲಕ್ಷ ಸಂಪಾದಿಸಲಿವೆ. ಭಾಗವಹಿಸುವ ಪ್ರತಿಯೊಂದು ತಂಡಗಳಿಗೆ ₹22 ಲಕ್ಷ ಸಿಗಲಿದೆ.
‘ಮಹಿಳಾ ಕ್ರಿಕೆಟ್‌ಗೆ ಜನಪ್ರಿಯತೆ ಹೆಚ್ಚಿಸುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. 2024ರ ವಿಶ್ವಕಪ್‌ಗೆ ಮೊದಲು ಘೋಷಿಸಿದಂತೆ ಬಹುಮಾನ ಮೊತ್ತದಲ್ಲಿ ಸಮಾನತೆ ತರುವ ಉದ್ದೇಶದಿಂದಲೂ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬಾರಿಯ ವಿಶ್ವಕಪ್ ಪಂದ್ಯಗಳು ಐದು ತಾಣಗಳಲ್ಲಿ– ಭಾರತದ ಗುವಾಹಟಿ, ಇಂದೋರ್, ನವಿ ಮುಂಬೈ, ವಿಶಾಖಪಟ್ಟಣ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿ– ನಡೆಯಲಿವೆ. ಪಾಕಿಸ್ತಾನ ತನ್ನ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ.
‘ಮಹಿಳಾ ಕ್ರಿಕೆಟ್‌ಗೆ ಆದ್ಯತೆ ನೀಡುವುದು ಈ ಕ್ರಮದ ಹಿಂದಿನ ಉದ್ದೇಶ. ಮಹಿಳಾ ಕ್ರಿಕೆಟ್ ಬೆಳವಣಿಗೆಯ ದೃಷ್ಟಿಯಿಂದ ಇದು ಮಹತ್ವದ ಮೈಲಿಗಲ್ಲಾಗಿದೆ’ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.