ಮಿಚೇಲ್ ಸ್ಟಾರ್ಕ್ ಬ್ಯಾಟಿಂಗ್ ವೈಖರಿ
ರಾಯಿಟರ್ಸ್ ಚಿತ್ರ
ಲಂಡನ್: ಕೆಳಕ್ರಮಾಂಕದ ಬ್ಯಾಟರ್ ಮಿಚೇಲ್ ಸ್ಟಾರ್ಕ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 282 ರನ್ ಗುರಿ ನೀಡಿದೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಬೌಲರ್‌ಗಳು ಮೇಲುಗೈ ಸಾಧಿಸಿದ ಪಂದ್ಯದಲ್ಲಿ ಮೆರೆದ ಸ್ಟಾರ್ಕ್, ಆಸ್ಟ್ರೇಲಿಯಾ ಪರ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದರು.
ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌ನಲ್ಲಿ 212 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಆಫ್ರಿಕಾ ಪಡೆ 138 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತ್ತು.
ಅಲೆಕ್ಸ್–ಸ್ಟಾರ್ಕ್ ಆಸರೆ
74 ರನ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸಿಸ್‌ಗೆ ಮತ್ತೊಮ್ಮೆ ಬ್ಯಾಟರ್‌ಗಳು ಕೈಕೊಟ್ಟರು. ತಂಡದ ಮೊತ್ತ 73 ಆಗುವ ಹೊತ್ತಿಗೆ ಏಳು ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡಿದ್ದರು.
ಈ ಹಂತದಲ್ಲಿ ಜೊತೆಯಾದ ಅಲೆಕ್ಸ್ ಕ್ಯಾರಿ ಮತ್ತು ಮಿಚೇಲ್ ಸ್ಟಾರ್ಕ್, ಆಸಿಸ್‌ಗೆ ಆಸರೆಯಾದರು. 8ನೇ ವಿಕೆಟ್ ಪಾಲುದಾರಿಕೆಯಲ್ಲಿ 61 ರನ್ ಕೂಡಿಸಿದ ಈ ಇಬ್ಬರು, ಆಫ್ರಿಕನ್ನರ ಆರಂಭಿಕ ಯಶಸ್ಸನ್ನು ಕಸಿದುಕೊಂಡರು.
43 ರನ್ ಗಳಿಸಿದ್ದ ಅಲೆಕ್ಸ್ ಔಟಾದ ನಂತರವೂ ಸ್ಟಾರ್ಕ್ 'ಅಮೋಘ' ಆಟ ಮುಂದುವರಿಯಿತು. ನೇಥನ್ ಲಯನ್ ಜೊತೆ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಅವರು, ಕೊನೇ ವಿಕೆಟ್‌ಗೆ ಜೋಶ್ ಹ್ಯಾಜಲ್‌ವುಡ್ ಜೊತೆಗೂಡಿ ದಾಖಲೆಯ ರನ್ ಸೇರಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಅರ್ಧಶತಕ ಬಾರಿಸಿದ ಸ್ಟಾರ್ಕ್, ಹ್ಯಾಜಲ್‌ವುಡ್ ಜೊತೆ 59 ರನ್ ಕೂಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ತಂಡದ ಮೊತ್ತ 207 ಆಗಿದ್ದಾಗ ಹ್ಯಾಜಲ್‌ವುಡ್ (17 ರನ್) ವಿಕೆಟ್ ಒಪ್ಪಿಸಿದರು. ಇದರೊಂದಿಗೆ, ಆಸಿಸ್ ಇನಿಂಗ್ಸ್‌ಗೆ ತೆರೆ ಬಿದ್ದಿತು.
ಬರೋಬ್ಬರಿ 136 ಎಸೆತಗಳನ್ನು ಎದುರಿಸಿದ ಸ್ಟಾರ್ಕ್, 5 ಬೌಂಡರಿ ಸಹಿತ 58 ರನ್ ಗಳಿಸಿ ಅಜೇಯವಾಗಿ ಉಳಿದರು.
ಆಫ್ರಿಕಾ ಪರ ಮತ್ತೆ ಮಿಂಚಿದ ಕಗಿಸೊ ರಬಾಡ 4 ವಿಕೆಟ್ ಕಿತ್ತರು. ಲುಂಗಿ ಗಿಡಿ ಮೂರು ವಿಕೆಟ್ ಪಡೆದರೆ, ಮಾರ್ಕೊ ಯಾನ್ಸನ್, ವಿಯಾನ್ ಮುಲ್ಡರ್ ಮತ್ತು ಏಡನ್ ಮರ್ಕ್ರಂ ಒಂದೊಂದು ವಿಕೆಟ್ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.