ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯ 'ಡ್ರಾ' ಆದರೆ ವಿಜೇತರು ಯಾರು?

ಏಜೆನ್ಸೀಸ್
Published 28 ಮೇ 2021, 7:00 IST
Last Updated 28 ಮೇ 2021, 7:00 IST
ಟೀಮ್ ಇಂಡಿಯಾ
ಟೀಮ್ ಇಂಡಿಯಾ   

ದುಬೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯವು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಜೂನ್ 18ರಿಂದ 22ರ ವರೆಗೆ ಇಂಗ್ಲೆಂಡ್‌ನ ಸೌಥಾಂಪ್ಟನ್ ಮೈದಾನದಲ್ಲಿ ನಡೆಯಲಿದೆ.

ಹಾಗೊಂದು ವೇಳೆ ಪಂದ್ಯ 'ಡ್ರಾ' ಫಲಿತಾಂಶದಲ್ಲಿ ಅಂತ್ಯಗೊಂಡರೆ ಇತ್ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುವುದು ಎಂದು ಐಸಿಸಿ ಪ್ರಕಟಿಸಿದೆ.

ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಕ್ರಿಕೆಟ್ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಐಸಿಸಿ ನಿಯಮಾವಳಿಗಳನ್ನು ಬಿಡುಗಡೆಗೊಳಿಸಿದೆ. ಇದರಂತೆ ಬಹುನಿರೀಕ್ಷಿತ ಪಂದ್ಯವು 'ಡ್ರಾ' ಅಥವಾ 'ಟೈ' ಫಲಿತಾಂಶದಲ್ಲಿ ಅಂತ್ಯಗೊಂಡರೆ ಇತ್ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲು ತೀರ್ಮಾನಿಸಲಾಗಿದೆ.

ADVERTISEMENT

ಫೈನಲ್‌ನ ನಿಯಮಿತ ದಿನಗಳ ಅವಧಿಯಲ್ಲಿ ಕಳೆದು ಹೋದ ಸಮಯವನ್ನು ಸರಿದೂಗಿಸಲು ಮೀಸಲು ದಿನವನ್ನು ಇರಿಸಲಾಗಿದೆ. ಅಂದರೆ ಜೂನ್ 23 ದಿನಾಂಕವನ್ನು ರಿಸರ್ವ್ ಡೇ ಆಗಿ ಪರಿಗಣಿಸಲಾಗಿದೆ. ಐದು ದಿನಗಳ ಸಂಪೂರ್ಣ ಆಟವನ್ನು ಖಚಿತಪಡಿಸಿಕೊಳ್ಳಲು ಮೀಸಲು ದಿನವನ್ನು ಇರಿಸಲಾಗಿದೆ. ಈ ಕುರಿತು ಮ್ಯಾಚ್ ರೆಫರಿ ನಿರ್ಧರಿಸಲಿದ್ದಾರೆ.

ಐದು ದಿನಗಳ ಆಟಗಳ ಬಳಿಕ ಫಲಿತಾಂಶ ದಾಖಲಿಸಲು ಸಾಧ್ಯವಾಗದಿದ್ದರೆ ಅಂತಹ ಸನ್ನಿವೇಶದಲ್ಲಿ ಡ್ರಾ ಎಂದು ಘೋಷಿಸಲಾಗುವುದು. ಹಾಗೆಯೇ ಗ್ರೇಡ್ 1 ಡ್ಯೂಕ್ ಬಾಲ್‌ನಲ್ಲಿ ಪಂದ್ಯವನ್ನು ಆಯೋಜಿಸಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.