ADVERTISEMENT

WCL 2025| ನನ್ನ ನಿಲುವು ಬದಲಾಗದು: ಪಾಕ್‌ ಪತ್ರಕರ್ತನಿಗೆ ಶಿಖರ್ ಧವನ್‌ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2025, 15:34 IST
Last Updated 27 ಜುಲೈ 2025, 15:34 IST
ಶಿಖರ್ ಧವನ್‌–‍ಪಿಟಿಐ ಚಿತ್ರ
ಶಿಖರ್ ಧವನ್‌–‍ಪಿಟಿಐ ಚಿತ್ರ   

ಬೆಂಗಳೂರು: ಪಾಕಿಸ್ತಾನ ವಿರುದ್ಧ ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್‌ (ಡಬ್ಲ್ಯುಸಿಎಲ್‌) ಸೆಮಿಫೈನಲ್ ಪಂದ್ಯ ಆಡುವ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಶಿಖರ್ ಧವನ್‌ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಡಬ್ಲ್ಯುಸಿಎಲ್‌ ಸೆಮಿಫೈನಲ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾದರೆ ನಿಮ್ಮ ನಿಲುವು ಏನು ಎಂದು ಪಾಕ್‌ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಧವನ್‌, 'ಈ ಪ್ರಶ್ನೆ ಕೇಳಲು ಇದು ಸರಿಯಾದ ಜಾಗವಲ್ಲ. ನೀವು ಅಂತಹ ಪ್ರಶ್ನೆಯನ್ನು ಈ ಸಮಯದಲ್ಲಿ ಕೇಳಬಾರದಿತ್ತು. ಆದರೂ ಹೇಳುತ್ತೇನೆ ‌ಕೇಳಿ. ನಾವು ಮೊದಲು ಆಡಿಲ್ಲ. ಈಗಲೂ ಆಡುವುದಿಲ್ಲ. ಈ ವಿಷಯದಲ್ಲಿ ನನ್ನ ನಿಲುವು ಬದಲಾಗದು' ಎಂದು ತಿಳಿಸಿದ್ದಾರೆ.

ಶಿಖರ್‌ ಧವನ್‌ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ADVERTISEMENT

ಡಬ್ಲ್ಯುಸಿಎಲ್‌ ಟೂರ್ನಿಯಲ್ಲಿ ಭಾರತ ತಂಡದ ಆಟಗಾರರು ಪಾಕ್‌ ಜೊತೆ ಪಂದ್ಯವಾಡಲು ನಿರಾಕರಿಸಿದ್ದರು. ಡಬ್ಲ್ಯುಸಿಎಲ್‌ ಟೂರ್ನಿಯಲ್ಲಿ ಭಾರತ– ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದು ಗೊಳಿಸಲಾಗಿದೆ. ಭಾರತ ಲೆಜೆಂಡ್ಸ್​ ತಂಡದ ಕೆಲ ಆಟಗಾರರು ಪಾಕಿಸ್ತಾನದ ಜೊತೆಗೆ ಆಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಬ್ಲ್ಯುಸಿಎಲ್‌ ಆಯೋಜಕರು ತಿಳಿಸಿದ್ದರು.

ಪಹಲ್ಗಾಮ್‌ ದಾಳಿ ಹಾಗೂ ಇತ್ತೀಚಿಗೆ ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಶಿಖರ್‌ ಧವನ್‌ ಸೇರಿದಂತೆ ಭಾರತ ತಂಡದ ಆಟಗಾರರು ಪಾಕ್‌ ಜೊತೆ ಪಂದ್ಯವಾಡಲು ನಿರಾಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.