ADVERTISEMENT

ವಿಫಲವಾದರೆ ಕ್ರಮಾಂಕ ಬದಲಿಸುವ ಸ್ಥಿತಿ ಈಗ ಇದೆ ಎಂದ ಸೆಹ್ವಾಗ್‌ರಿಂದ ಧೋನಿಯ ಗುಣಗಾನ

ಏಜೆನ್ಸೀಸ್
Published 21 ಜನವರಿ 2020, 12:49 IST
Last Updated 21 ಜನವರಿ 2020, 12:49 IST
   

ನವದೆಹಲಿ:ಮುಂದಿನ ಸರಣಿಯಲ್ಲಿ ಕೆ.ಎಲ್‌. ರಾಹುಲ್ ವೈಫಲ್ಯ ಅನುಭವಿಸಿದರೆ, ತಂಡದ ಆಡಳಿತ ಮಂಡಳಿಯು ಅವರ ಕ್ರಮಾಂಕವನ್ನು ಬದಲಿಸುತ್ತದೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಅಭಿಪ್ರಾಯಪಟ್ಟಿದ್ದಾರೆ.

‘ಒಂದುವೇಳೆ ರಾಹುಲ್‌ 5ನೇ ಕ್ರಮಾಂಕದಲ್ಲಿ ನಾಲ್ಕು ಬಾರಿ ವೈಫಲ್ಯ ಅನುಭವಿಸಿದರೆ, ಸದ್ಯ ಇರುವಆಡಳಿತ ಮಂಡಳಿಯು ಅವರ ಕ್ರಮಾಂಕವನ್ನು ಬದಲಿಸಲು ನೋಡುತ್ತದೆ. ಧೋನಿ ನಾಯಕನಾಗಿದ್ದಾಗ ಹೀಗಾಗುತ್ತಿರಲಿಲ್ಲ. ಆಟಗಾರ ಅದೇ ಕ್ರಮಾಂಕದಲ್ಲಿ ಆಡಲು ಅವರಿಗೆ ನೀಡಬೇಕಿರುವ ಪ್ರೋತ್ಸಾಹದ ಮಹತ್ವದ ಬಗ್ಗೆ ಧೋನಿಗೆ ಅರಿವಿತ್ತು’ ಎಂದು ಹೇಳಿದ್ದಾರೆ.

‘ಧೋನಿ ನಾಯಕನಾಗಿದ್ದಾಗ ತಂಡದ ಬ್ಯಾಟಿಂಗ್‌ ವಿಭಾಗದ ಪ್ರತಿಯೊಬ್ಬ ಆಟಗಾರರನ ಸ್ಥಾನದ ಬಗ್ಗೆ ಸ್ಪಷ್ಟತೆ ಇರುತ್ತಿತ್ತು. ಪ್ರತಿಭೆಗಳ ಮೇಲೆ ಕಣ್ಣಿಡುತ್ತಿದ್ದ ಅವರು, ತಂಡಕ್ಕೆ ವೈಯಕ್ತಿಕ ಕೊಡುಗೆ ನೀಡಬಲ್ಲವರನ್ನು ಗುರುತಿಸುತ್ತಿದ್ದರು’ ಎಂದೂ ಹೇಳಿಕೊಂಡಿದ್ದಾರೆ.

ADVERTISEMENT

ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ನಾಯಕನಿಂದ ಸೂಕ್ತ ಬೆಂಬಲ ದೊರೆಯಬೇಕಾಗುತ್ತದೆ. ಒಂದು ವೇಳೆ ನೀವು ಆಟಗಾರರಿಗೆ ಸಮಯ ನೀಡದಿದ್ದರೆ, ಅವರು ಕಲಿಯುವುದು ಮತ್ತು ದೊಡ್ಡ ಆಟಗಾರರಾಗಿ ಬೆಳೆಯುವುದು ಹೇಗೆ? ನಾನು ಆರಂಭಿಕನಾಗಿ ಆಡುವ ಮುನ್ನ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ತಪ್ಪು ಮಾಡಿದ್ದೇನೆ. ಆ ತಪ್ಪುಗಳು ತಂಡದ ಸೋಲಿಗೂ ಕಾರಣವಾಗಿವೆ. ಆದರೆ, ನೀಮ್ಮನ್ನು ತಂಡದಿಂದ ಕೈಬಿಟ್ಟರೆ, ನೀವು ದೊಡ್ಡ ಆಟಗಾರರಾಗಲಾರಿರಿ. ಆಟಗಾರರಿಗೆ ಸಮಯ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ರಾಹುಲ್‌ ವಿಕೆಟ್‌ ಕೀಪರ್‌ ಜವಾಬ್ದಾರಿ ನಿಭಾಯಿಸಿದ್ದರು. ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿ 47 ರನ್‌ ಗಳಿಸಿದ್ದ ಅವರು ಎರಡನೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಆ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ 80 ರನ್‌ ಗಳಿಸಿದ್ದರು.

ಬಳಿಕ ಮೂರನೇ ಪಂದ್ಯದಲ್ಲಿ ಧವನ್‌ ಗಾಯಗೊಂಡದ್ದರಿಂದ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದರು.

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ರಿಷಭ್‌ ಪಂತ್‌ ಹೆಲ್ಮೆಟ್‌ಗೆ ಚೆಂಡು ಬಡಿದಿತ್ತು. ಪಂತ್‌ ಅನುಪಸ್ಥಿತಿಯಲ್ಲಿ ರಾಹುಲ್‌ ನೀಡಿದ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.