ADVERTISEMENT

ಮತ್ತೆ ಟಿ20 ನಾಯಕತ್ವ ತ್ಯಜಿಸಿರುವುದಕ್ಕೆ ಕಾರಣ ಕೇಳಿದ್ದಕ್ಕೆ ಕೊಹ್ಲಿ ಗರಂ

ಪಿಟಿಐ
Published 23 ಅಕ್ಟೋಬರ್ 2021, 11:43 IST
Last Updated 23 ಅಕ್ಟೋಬರ್ 2021, 11:43 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಬಳಿಕ ಚುಟುಕು ಕ್ರಿಕೆಟ್‌ನಿಂದ ನಾಯಕತ್ವ ತ್ಯಜಿಸುವ ನಿರ್ಧಾರದ ಹಿಂದಿನ ಯಾವುದೇ ಕಾರಣವನ್ನು ಚರ್ಚಿಸಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರಾಕರಿಸಿದ್ದಾರೆ.

ಇಲ್ಲದೆ ಇರುವುದನ್ನು ಪದೇ ಪದೇ ಕೆದಕುತ್ತಾ ವಿವಾದವನ್ನು ಹುಟ್ಟು ಹಾಕಲು ಪ್ರಯತ್ನಿಸುವವರಿಗೆ ಮೇವು ಹಾಕಲು ಬಯಸುವುದಿಲ್ಲ ಎಂದು ಗರಂ ಆಗಿದ್ದಾರೆ.

ಐಪಿಎಲ್‌ 2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವ ವೇಳೆಯಲ್ಲಿ ವಿಶ್ವಕಪ್ ಬಳಿಕ ಟಿ20 ನಾಯಕತ್ವ ತೊರೆಯುವುದಾಗಿ ವಿರಾಟ್ ಘೋಷಿಸಿದ್ದರು. ಬೆನ್ನಲ್ಲೇ ಆರ್‌ಸಿಬಿ ಕಪ್ತಾನಗಿರಿಯನ್ನು ತೊರೆದಿದ್ದರು.

ದಿಢೀರ್ ಆಗಿ ನಾಯಕತ್ವ ತೊರೆಯುವ ವಿರಾಟ್ ನಿರ್ಧಾರದ ಹಿಂದೆ ಹಲವಾರು ವದಂತಿಗಳು ಹರಿದಾಡಿದ್ದವು. ಆದರೆ ಇವೆಲ್ಲಕ್ಕೂ ಆಸ್ಪದ ಕೊಡಲು ಕೊಹ್ಲಿ ಬಯಸುತ್ತಿಲ್ಲ. 'ನಾನು ಈಗಾಗಲೇ ನನ್ನ ಬಗ್ಗೆ ಸಾಕಷ್ಟು ವಿವರಿಸಿದ್ದೇನೆ. ಇನ್ನು ಮುಂದೆ ಇದರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.

'ನಾವು ವಿಶ್ವಕಪ್‌ನಲ್ಲಿ ಒಂದು ತಂಡವಾಗಿ ಉತ್ತಮವಾಗಿ ಆಡುವುದರತ್ತ ಗಮನ ಕೇಂದ್ರಿಕರಿಸಿದ್ದೇವೆ. ತುಂಬಾ ಪ್ರಾಮಾಣಿಕವಾಗಿ ನನ್ನ ಬಗ್ಗೆ ಬಹಿರಂಗವಾಗಿ ವಿವರಿಸಿದ್ದೇನೆ. ಉಳಿದವರು ಅಸ್ತಿತ್ವದಲ್ಲಿಲ್ಲದ ವಿಷಯಗಳನ್ನು ಕೆದಕಲು ಪ್ರಯತ್ನಿಸುತ್ತಾರೆ. ಅಂಥವರಿಗೆ ಎಂದಿಗೂ ಮೇವು ಹಾಕಲು ಬಯಸುವುದಿಲ್ಲ' ಎಂದು ಕೊಹ್ಲಿ ತಿಳಿಸಿದರು.

ಈ ಮೊದಲು ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾಯಕತ್ವ ತೊರೆಯಲು ಕೊಹ್ಲಿ ಮೇಲೆ ಯಾವುದೇ ಒತ್ತಡವನ್ನು ಹೇರಿಲ್ಲ. ಅದು ಅವರ ಸ್ವಂತ ನಿರ್ಧಾರವಾಗಿತ್ತು ಎಂದು ಹೇಳಿದ್ದರು.

'ವಿರಾಟ್ ಕೊಹ್ಲಿ ನಿರ್ಧಾರದಿಂದ ನನಗೆ ಆಶ್ಚರ್ಯವಾಯಿತು. ಈ ನಿರ್ಧಾರವನ್ನು ಇಂಗ್ಲೆಂಡ್ ಪ್ರವಾಸದ ಬಳಿಕ ತೆಗೆದುಕೊಂಡಿರಬಹುದು. ಇದು ಅವರ ನಿರ್ಣಯ. ನಮ್ಮ ಕಡೆಯಿಂದ ಯಾವುದೇ ಒತ್ತಡವಿರಲಿಲ್ಲ. ನಾವು ಅವರಿಗೆ ಏನನ್ನೂ ಹೇಳಲಿಲ್ಲ' ಎಂದು ಸ್ಪಷ್ಟನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.