ADVERTISEMENT

ಐರ್ಲೆಂಡ್‌ ವಿರುದ್ಧ ಭಾರತಕ್ಕೆ ಸರಣಿ ಜಯ: ಆಕ್ರಮಣ ಶೈಲಿ ಇಷ್ಟ ಎಂದ ದೀಪಕ್ ಹೂಡಾ

ಪಿಟಿಐ
Published 30 ಜೂನ್ 2022, 4:15 IST
Last Updated 30 ಜೂನ್ 2022, 4:15 IST
ದೀಪಕ್ ಹೂಡಾ – ಎಎಫ್‌ಪಿ ಚಿತ್ರ
ದೀಪಕ್ ಹೂಡಾ – ಎಎಫ್‌ಪಿ ಚಿತ್ರ   

ಡಬ್ಲಿನ್‌, ಐರ್ಲೆಂಡ್‌: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಆಡಿದ ರೀತಿಯಲ್ಲಿಯೇ ಇಲ್ಲಿಯೂ ಉತ್ತಮ ಸಾಮರ್ಥ್ಯ ತೋರಲು ಬಯಸಿದ್ದೆ. ಹೀಗಾಗಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದೆ ಎಂದು ಭಾರತ ಕ್ರಿಕೆಟ್‌ ತಂಡದ ಆಟಗಾರ ದೀಪಕ್ ಹೂಡಾ ಹೇಳಿದ್ದಾರೆ.

ಮಂಗಳವಾರ ಇಲ್ಲಿಯ ಮಾಲಹಿಡೆಯಲ್ಲಿ ನಡೆದ ಐರ್ಲೆಂಡ್‌ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಹೂಡಾ ಭರ್ಜರಿ ಶತಕ ಸಿಡಿಸಿದ್ದರು. 57 ಎಸೆತಗಳಲ್ಲಿ 104 ರನ್ ಗಳಿಸಿದ್ದ ಅವರ ಆಟದ ಬಲದಿಂದ ತಂಡವು ನಾಲ್ಕು ರನ್‌ಗಳ ರೋಚಕ ಜಯ ಸಾಧಿಸಿತ್ತು. ಎರಡು ಪಂದ್ಯಗಳ ಸರಣಿಯನ್ನು 2–0ಯಿಂದ ತನ್ನದಾಗಿಸಿಕೊಂಡಿತ್ತು.

ಆರಂಭಿಕ ಆಟಗಾರ ಇಶಾನ್‌ ಕಿಶನ್‌ ವಿಕೆಟ್‌ ಪತನದ ಬಳಿಕ ಮೂರನೇ ಕ್ರಮಾಂಕದಲ್ಲಿಆಡಿದ್ದ ಹೂಡಾ ಒಂಬತ್ತು ಬೌಂಡರಿ ಮತ್ತು ಆರು ಸಿಕ್ಸರ್ ಸಿಡಿಸಿದ್ದರು.

ADVERTISEMENT

ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಸಂಜು ಸ್ಯಾಮ್ಸನ್‌ (77) ಜೊತೆಗೂಡಿ ದಾಖಲೆಯ 176 ರನ್‌ ಗಳಿಸಿದ್ದರು. ಟಿ20 ಟೂರ್ನಿಯಲ್ಲಿ ಯಾವುದೇ ವಿಕೆಟ್‌ಗೆ ಭಾರತದ ಜೋಡಿಯಿಂದ ದಾಖಲಾದ ಗರಿಷ್ಠ ಜೊತೆಯಾಟವಿದು. 2017ರಲ್ಲಿ ರೋಹಿತ್‌ ಶರ್ಮಾ ಮತ್ತು ಕೆ.ಎಲ್‌.ರಾಹುಲ್‌ 165 ರನ್‌ ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.

‘ನಾನು ಯಾವತ್ತೂ ಆರಂಭಿಕನಾಗಿ ಕಣಕ್ಕಿಳಿದಿಲ್ಲ. ಆದರೆ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ ಸವಾಲುಗಳನ್ನು ಎದುರಿಸಲು ಯೋಧನಂತೆ ಸಿದ್ಧರಾಗಿರಬೇಕು. ಹೊಸ ಚೆಂಡಿನಲ್ಲಿ ಬೌಲರ್‌ಗಳು ಪರಿಣಾಮಕಾರಿಯಾಗಿರುವ ಸಂದರ್ಭದಲ್ಲಿ ಆಕ್ರಮಣಕಾರಿ ಆಗುವುದು ಅವಶ್ಯ‘ ಎಂದು ಹೂಡಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.