ADVERTISEMENT

ಕೊಹ್ಲಿ ಫಾರ್ಮ್ ವಿಚಾರ ಮಾಧ್ಯಮಗಳಿಂದಲೇ ಮುನ್ನೆಲೆಗೆ ಬಂದಿದೆ: ರೋಹಿತ್‌ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2022, 10:05 IST
Last Updated 15 ಫೆಬ್ರುವರಿ 2022, 10:05 IST
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ –ಪಿಟಿಐ ಚಿತ್ರ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ –ಪಿಟಿಐ ಚಿತ್ರ   

ನವದೆಹಲಿ: ವಿರಾಟ್‌ ಕೊಹ್ಲಿ ಅವರಿಗೆ ಒತ್ತಡದ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್, ‘ಮಾಧ್ಯಮದವರಿಂದಲೇ ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ವಿಚಾರ ಮುನ್ನೆಲೆಗೆ ಬಂದಿದೆ’ ಎಂದು ಹೇಳುವ ಮೂಲಕ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ವಿಚಾರವಾಗಿ ಎದ್ದಿದ್ದ ಊಹಾಪೋಹಗಳನ್ನು ತಳ್ಳಿಹಾಕುವ ಪ್ರಯತ್ನ ಮಾಡಿದ್ದಾರೆ.

‘ಬ್ಯಾಟಿಂಗ್ ಫಾರ್ಮ್ ಕುರಿತಾದ ಚರ್ಚೆ ನಿಮ್ಮಿಂದಲೇ (ಮಾಧ್ಯಮಗಳಿಂದಲ್ಲೇ) ಪ್ರಾರಂಭವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಮಾಧ್ಯಮದವರು ಸಂಯಮ ಕಾಪಾಡಿಕೊಳ್ಳಬೇಕು. ಕೊಹ್ಲಿ ಅವರು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಕೊಹ್ಲಿ ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನ ಭಾಗವಾಗಿದ್ದಾರೆ. ಯಾರಾದರೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲ ಆಡಿದರೆ, ಅವರಿಗೆ ಒತ್ತಡದ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕೆಂದು ಚೆನ್ನಾಗಿ ತಿಳಿದಿರುತ್ತದೆ’ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ವಲಯದಲ್ಲಿ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ಫಾರ್ಮ್ ಚರ್ಚೆಯ ವಿಷಯವಾಗಿದೆ ಎಂದರೆ ತಪ್ಪಲ್ಲ. ನಾಯಕತ್ವದಿಂದ ಕೆಳಗಿಳಿದ ಬಳಿಕ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಗಳಿಸಿದ್ದರು. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಕೊಹ್ಲಿ ಗಳಿಸಿದ್ದು ಕೇವಲ 26 ರನ್‌ ಮಾತ್ರ.

ಟೀಮ್ ಇಂಡಿಯಾಗೆ ಗಾಯದ ಸಮಸ್ಯೆ
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ–20 ಸರಣಿಯು ಫೆ. 16ರಿಂದ (ಬುಧವಾರ) ಆರಂಭವಾಗಲಿದೆ. ಆದರೆ, ತಂಡದ ಪ್ರಮುಖ ಆಟಗಾರರಾದ ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.