ADVERTISEMENT

ಭಾರತ ತಂಡದ ನಾಯಕನೊಂದಿಗೆ ಧೋನಿ ಮಾತುಕತೆ: ಗಂಗೂಲಿ

ಪಿಟಿಐ
Published 28 ಡಿಸೆಂಬರ್ 2019, 19:45 IST
Last Updated 28 ಡಿಸೆಂಬರ್ 2019, 19:45 IST
ಸೌರವ್ ಗಂಗೂಲಿ ಹಾಗೂ ಮಹೇಂದ್ರಸಿಂಗ್ ಧೋನಿ
ಸೌರವ್ ಗಂಗೂಲಿ ಹಾಗೂ ಮಹೇಂದ್ರಸಿಂಗ್ ಧೋನಿ   

ನವದೆಹಲಿ: ಮಹೇಂದ್ರಸಿಂಗ್ ಧೋನಿ ತಮ್ಮ ಭವಿಷ್ಯದ ನಿರ್ಧಾರದ ಕುರಿತು ಭಾರತ ತಂಡದ ನಾಯಕ ಮತ್ತು ಆಯ್ಕೆ ಸಮಿತಿಯೊಂದಿಗೆ ‘ಖಂಡಿತ’ವಾಗಿ ಮಾತನಾಡಿರಬಹುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

‘ಅವರು (ಧೋನಿ) ನಾಯಕ ಮತ್ತು ಅಯ್ಕೆಗಾರರೊಂದಿಗೆ ಮಾತನಾಡಿರಬಹುದೆಂಬ ವಿಶ್ವಾಸವಿದೆ. ಆದರೆ ಧೋನಿ ಭವಿಷ್ಯದ ಕುರಿತು ಮಾತನಾಡಲು ಇದು ವೇದಿಕೆ ಅಲ್ಲ’ ಎಂದು ಗಂಗೂಲಿ ‘ಇಂಡಿಯಾ ಟುಡೆ’ಯ ‘ಇನ್ಸ್‌ಪಿರೇಷನ್’ ಕಾರ್ಯಕ್ರಮದಲ್ಲಿ ಹೇಳಿದರು.

‘ಧೋನಿಗೆ ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸುವ ಸಂಪೂರ್ಣ ಹಕ್ಕು ಇದೆ. ಅವರ ನಿರ್ಧಾರ ಏನೆಂಬುದು ಗೊತ್ತಿಲ್ಲ. ಇದುವರೆಗೂ ನಾನು ಅವರೊಂದಿಗೆ ಈ ಕುರಿತು ಮಾತನಾಡಿಲ್ಲ. ಅವರು ಭಾರತ ಕ್ರಿಕೆಟ್ ಕ್ಷೇತ್ರದ ಅಪ್ಪಟ ಚಾಂಪಿಯನ್’ ಎಂದು ಶ್ಲಾಘಿಸಿದರು.

ADVERTISEMENT

ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡವು ಸೋತ ನಂತರ ಧೋನಿ ಯಾವುದೇ ಸರಣಿಯಲ್ಲಿಯೂ ಆಡಿಲ್ಲ. ಆರು ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರವೇ ಇರುವ ಅವರು ತಮ್ಮ ನಿವೃತ್ತಿ ಅಥವಾ ಮರುಪ್ರವೇಶದ ಬಗ್ಗೆ ಎಲ್ಲಿಯೂ ಹೇಳಿಲ್ಲ.

ಆಸ್ಟ್ರೇಲಿಯಾ ಸವಾಲು: ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಜಯಿಸುವುದು ಭಾರತಕ್ಕೆ ನಿಜವಾದ ಸವಾಲು ಎಂದು ಗಂಗೂಲಿ ಅಭಿಪ್ರಾಯಪಟ್ಟರು.

ಹೋದ ವರ್ಷ ಭಾರತವು ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾಗ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಇರಲಿಲ್ಲ. ಆಗ ಭಾರತವು ಗೆದ್ದಿತ್ತು.

‘ಈ ಸವಾಲನ್ನು ವಿರಾಟ್ ಕೊಹ್ಲಿ ನಾಯಕತ್ವದ ತಂಡವು ಯಶಸ್ವಿಯಾಗಿ ಎದುರಿಸಲಿದೆ. ಹೊಸದೊಂದು ಇತಿಹಾಸ ರಚಿಸಲಿದೆ. ನಮ್ಮ ತಂಡಕ್ಕೆ ಅಂತಹ ಸಾಮರ್ಥ್ಯವಿದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.

2020ರ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ನಡೆಯಲಿದೆ. ಅದಕ್ಕೂ ಮುನ್ನ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.