ADVERTISEMENT

Sydney Test: ರಿಷಭ್ ಪಂತ್ ವೇಗದ ಅರ್ಧಶತಕ; ಭಾರತಕ್ಕೆ 145 ರನ್ ಮುನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2025, 7:24 IST
Last Updated 4 ಜನವರಿ 2025, 7:24 IST
<div class="paragraphs"><p>ರಿಷಭ್‌ ಪಂತ್‌ ಬ್ಯಾಟಿಂಗ್‌ ವೈಖರಿ ಹಾಗೂ ಭಾರತ ಕ್ರಿಕೆಟ್‌ ತಂಡದ ಆಟಗಾರರು</p></div>

ರಿಷಭ್‌ ಪಂತ್‌ ಬ್ಯಾಟಿಂಗ್‌ ವೈಖರಿ ಹಾಗೂ ಭಾರತ ಕ್ರಿಕೆಟ್‌ ತಂಡದ ಆಟಗಾರರು

   

ಚಿತ್ರಕೃಪೆ: ಪಿಟಿಐ ಹಾಗೂ @BCCI (X)

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ರಿಷಭ್‌ ಪಂತ್, ಭಾರತದ ಪರ ವೇಗವಾಗಿ ಅರ್ಧಶತಕ ಗಳಿಸಿದರು. ಅವರ ಆಟದ ಬಲದಿಂದ ಟೀಂ ಇಂಡಿಯಾ, 145 ರನ್‌ಗಳ ಮುನ್ನಡೆ ಸಾಧಿಸಿದೆ.

ADVERTISEMENT

ಬಾರ್ಡರ್‌–ಗವಾಸ್ಕರ್‌ ಸರಣಿಯ ಕೊನೇ ಟೆಸ್ಟ್‌ ಪಂದ್ಯವು ಸಿಡ್ನಿಯಲ್ಲಿ ನಡೆಯುತ್ತಿದೆ. 4 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿರುವ ಭಾರತ 2ನೇ ದಿನದಾಟದ ಅಂತ್ಯಕ್ಕೆ 32 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 141 ರನ್‌ ಗಳಿಸಿದೆ.

ಆಸಿಸ್‌ ದಾಳಿ ಎದುರು, ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದರು. ತಂಡದ ಮೊತ್ತ, 59ಕ್ಕೆ 3 ವಿಕೆಟ್‌ ಆಗಿದ್ದಾಗ ಕ್ರೀಸ್‌ಗೆ ಬಂದ ರಿಷಭ್‌, ಬೀಸಾಟವಾಡಿದರು. ಟೀಂ ಇಂಡಿಯಾ ಪರ ಏಕೈಕ ಅರ್ಧಶತಕ ಸಿಡಿಸಿ, ಪ್ರವಾಸಿ ಪಡೆಯ ಇನಿಂಗ್ಸ್‌ಗೆ ಬಲ ತುಂಬಿದರು.

29ನೇ ಎಸೆತದಲ್ಲಿ ಅರ್ಧಶತಕದ ಗಡಿ ದಾಟಿದ ಅವರು, ದೀರ್ಘ ಮಾದರಿಯಲ್ಲಿ ಎರಡನೇ ಸಲ 30ಕ್ಕಿಂತ ಕಡಿಮೆ ಎಸೆತಗಳಲ್ಲಿ 50 ರನ್ ಗಳಿಸಿದರು. ಒಟ್ಟಾರೆ, 33 ಎಸೆತಗಳನ್ನು ಎದುರಿಸಿದ ಪಂತ್‌, 6 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 61 ರನ್‌ ಗಳಿಸಿದರು.

ವೈಫಲ್ಯ ಅನುಭವಿಸಿದ ಯಶಸ್ವಿ ಜೈಸ್ವಾಲ್‌ 22 ರನ್ ಗಳಿಸಿದರೆ, ಕೆ.ಎಲ್‌.ರಾಹುಲ್‌ ಮತ್ತು ಶುಭಮನ್‌ ಗಿಲ್‌ ತಲಾ 13 ರನ್‌ ಗಳಿಸಿ ಔಟಾದರು. ಮತ್ತೊಮ್ಮೆ ಔಟ್‌ಸೈಡ್‌ ಆಫ್ ಎಸೆತ ಕೆಣಕಿದ ವಿರಾಟ್‌ ಕೊಹ್ಲಿ ಆಟ 6 ರನ್‌ಗಳಿಗೆ ಅಂತ್ಯವಾಯಿತು. ಟೂರ್ನಿಯುದ್ದಕ್ಕೂ ಭರವಸೆಯ ಆಟವಾಡಿದ್ದ ನಿತೀಶ್‌ ಕುಮಾರ್‌ ರೆಡ್ಡಿ 4 ರನ್‌ಗೆ ಔಟಾದರು.

ಸದ್ಯ ರವೀಂದ್ರ ಜಡೇಜ (8 ರನ್‌) ಮತ್ತು ವಾಷಿಂಗ್ಟನ್‌ ಸುಂದರ್‌ (6 ರನ್‌) ಕ್ರೀಸ್‌ನಲ್ಲಿದ್ದು, ಮೂರನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಆಸಿಸ್‌ ಪರ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಉರುಳಿಸಿದ್ದ ಸ್ಕಾಟ್‌ ಬೋಲ್ಯಾಂಡ್‌, ಮತ್ತೊಮ್ಮೆ ಅದೇ ಸಾಧನೆ ಮಾಡಿದ್ದಾರೆ. ಇನ್ನೆರಡು ವಿಕೆಟ್‌ಗಳನ್ನು ನಾಯಕ ಪ್ಯಾಟ್‌ ಕಮಿನ್ಸ್‌ ಮತ್ತು ಬ್ಯೂ ವೆಬ್‌ಸ್ಟರ್‌ ಹಂಚಿಕೊಂಡಿದ್ದಾರೆ.

ಆಸ್ಪತ್ರೆ ಸೇರಿದ ಬೂಮ್ರಾ
ನಾಯಕ ರೋಹಿತ್‌ ಶರ್ಮಾ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲು ತಂಡ ಮುನ್ನಡೆಸುತ್ತಿರುವ ವೇಗಿ ಜಸ್‌ಪ್ರೀತ್‌ ಬೂಮ್ರಾ, ಆಸಿಸ್‌ ಇನಿಂಗ್ಸ್‌ ವೇಳೆಯೇ ಗಾಯಾಳಾಗಿ ಆಸ್ಪತ್ರೆ ಸೇರಿದ್ದಾರೆ. ಹೀಗಾಗಿ, ಕೊಹ್ಲಿ ಉಳಿದ ಅವಧಿಗೆ ತಂಡದ ಹೊಣೆ ನಿಭಾಯಿಸಿದ್ದಾರೆ. ನಾಳೆ ಆಟ ಆರಂಭವಾಗುವ ಮುನ್ನ ಬೂಮ್ರಾ, ತಂಡಕ್ಕೆ ವಾಪಸ್ ಆಗುವರೇ ಎಂಬುದು ಕುತೂಹಲ ಮೂಡಿಸಿದೆ.

ಸಿಡ್ನಿಯಲ್ಲಿ ಪಂದ್ಯ ಶುಕ್ರವಾರ ಆರಂಭವಾಗಿದೆ. ಭಾರತ ತಂಡ, ಮೊದಲ ದಿನವೇ 185 ರನ್‌ಗಳಿಗೆ ಆಲೌಟ್‌ ಆಗಿತ್ತು. ನಂತರ ಇನಿಂಗ್ಸ್ ಆರಂಭಿಸಿ 9 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ಎರಡನೇ ದಿನ ಭಾರತದ ವೇಗಿಗಳ ದಾಳಿ ಎದುರು ತತ್ತರಿಸಿತು. ಮೊದಲ ದಿನದ ಮೊತ್ತಕ್ಕೆ 172 ರನ್‌ ಸೇರಿಸಿ, 181 ರನ್‌ಗಳಿಗೆ ಸರ್ವಪತನ ಕಂಡಿತು.

ಬೂಮ್ರಾ 2 ವಿಕೆಟ್‌ ಪಡೆದರೆ, ಮೊಹಮ್ಮದ್‌ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ತಲಾ ಮೂರು ವಿಕೆಟ್‌ ಉರುಳಿಸಿದರು. ಇನ್ನೆರಡು ವಿಕೆಟ್‌ಗಳು ನಿತೀಶ್‌ ಕುಮಾರ್‌ ರೆಡ್ಡಿ ಪಾಲಾದವು.

ಭಾರತ ಪರ ಟೆಸ್ಟ್‌ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದವರು
  • ರಿಷಭ್‌ ಪಂತ್‌: ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ 28 ಎಸೆತಗಳಲ್ಲಿ –2022

  • ರಿಷಭ್‌ ಪಂತ್‌: ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 29 ಎಸೆತಗಳಲ್ಲಿ –2024

  • ಕಪಿಲ್‌ ದೇವ್‌: ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧ 30 ಎಸೆತಗಳಲ್ಲಿ – 1982

  • ಶಾರ್ದೂಲ್‌ ಠಾಕೂರ್‌: ದಿ ಓವಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 31 ಎಸೆತಗಳಲ್ಲಿ – 2021

  • ಯಶಸ್ವಿ ಜೈಸ್ವಾಲ್‌: ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ 31 ಎಸೆತಗಳಲ್ಲಿ – 2021

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.