ADVERTISEMENT

ಆಸಿಸ್ ಎದುರಿನ ಅಂತಿಮ ಟೆಸ್ಟ್‌ನಲ್ಲಿ ಆಡುವರೇ ರೋಹಿತ್?: ಖಚಿತಪಡಿಸದ ಟೀಂ ಇಂಡಿಯಾ

ಪಿಟಿಐ
Published 2 ಜನವರಿ 2025, 5:47 IST
Last Updated 2 ಜನವರಿ 2025, 5:47 IST
<div class="paragraphs"><p>ಗೌತಮ್ ಗಂಭೀರ್, ರೋಹಿತ್ ಶರ್ಮಾ</p></div>

ಗೌತಮ್ ಗಂಭೀರ್, ರೋಹಿತ್ ಶರ್ಮಾ

   

ಪಿಟಿಐ ಚಿತ್ರ

ಸಿಡ್ನಿ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಆಸ್ಟ್ರೇಲಿಯಾ ಎದುರಿನ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಆಡುವರೇ ಎಂಬುದನ್ನು ಖಚಿತಪಡಿಸಲು ಮುಖ್ಯ ಕೋಚ್‌ ಗೌತಮ್‌ ಗಂಭೀರ್ ನಿರಾಕರಿಸಿದ್ದಾರೆ.

ADVERTISEMENT

ಸರಣಿಯ 5ನೇ ಹಾಗೂ ಅಂತಿಮ ಪಂದ್ಯವು ಸಿಡ್ನಿಯಲ್ಲಿ ನಾಳೆಯಿಂದ (ಶುಕ್ರವಾರ) ಆರಂಭವಾಗಲಿದೆ.

ಪಂದ್ಯದ ಮುನ್ನಾದಿನ ನಡೆಯುವ ಮಾಧ್ಯಮಗೋಷ್ಠಿಯಲ್ಲಿ ನಾಯಕ ಭಾಗವಹಿಸುವುದು ಸಾಮಾನ್ಯ. ಆದರೆ, ಈ ಬಾರಿ ಕೋಚ್‌ ಹಾಜರಾಗಿರುವುದೇಕೆ ಎಂಬ ಪ್ರಶ್ನೆಗೆ ಗಂಭೀರ್‌ ಪ್ರತಿಕ್ರಿಯಿಸಿದ್ದಾರೆ. 'ರೋಹಿತ್‌ ಜೊತೆಗಿನ ನಂಟು ಚೆನ್ನಾಗಿದೆ. ಇದು (ನಾಯಕ ಭಾಗವಹಿಸಬೇಕು ಎಂಬುದು) ಸಾಂಪ್ರದಾಯವೇನಲ್ಲ ಎಂದುಕೊಂಡಿದ್ದೇನೆ' ಎಂದಿದ್ದಾರೆ.

'ವಿಕೆಟ್‌ (ಪಿಚ್‌) ನೋಡಿದ ನಂತರ, ನಾಳೆ ತಂಡವನ್ನು ಅಂತಿಮಗೊಳಿಸುತ್ತೇವೆ' ಎಂದು ತಿಳಿಸಿದ್ದಾರೆ.

ರೋಹಿತ್‌ ಶರ್ಮಾ ಆಡಲಿದ್ದಾರೆಯೇ ಎಂಬ ಪ್ರಶ್ನೆಗೆ, 'ನಾನು ಈಗಷ್ಟೇ ಹೇಳಿದೆ. ಪಿಚ್‌ ನೋಡುತ್ತೇವೆ. ಬಹುಶಃ ನಾಳೆ ತಂಡವನ್ನು ಪ್ರಕಟಿಸುತ್ತೇವೆ' ಎಂದು ಪುನರುಚ್ಚರಿಸುವ ಮೂಲಕ, ಹೆಚ್ಚು ಹೇಳಲು ನಿರಾಕರಿಸಿದ್ದಾರೆ.

ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ಆಕಾಶ್‌ ದೀಪ್‌ ತಂಡದಿಂದ ಹೊರಗುಳಿಯಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ. ಆದರೆ, ಅವರ ಬದಲು ಯಾರಿಗೆ ಸ್ಥಾನ ನೀಡಲಾಗುತ್ತದೆ ಎಂಬುದನ್ನು ತಿಳಿಸಿಲ್ಲ.

ಟೂರ್ನಿಯಲ್ಲಿ ಆಸ್ಟ್ರೇಲಿಯಾ 2–1 ಅಂತರದ ಮುನ್ನಡೆ ಸಾಧಿಸಿದೆ.

ಮೊದಲ ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾ ನಾಯಕತ್ವದಲ್ಲಿ ಆಡಿದ್ದ ಭಾರತ, ಜಯ ಸಾಧಿಸಿತ್ತು. ನಂತರದ ಮೂರು ಪಂದ್ಯಗಳಲ್ಲಿ ರೋಹಿತ್‌ ತಂಡ ಮುನ್ನಡೆಸಿದ್ದರು. ಈ ಪೈಕಿ ಎರಡಲ್ಲಿ ಸೋಲು ಎದುರಾದರೆ, ಇನ್ನೊಂದು ಪಂದ್ಯ ಡ್ರಾ ಆಗಿದೆ. ಹೀಗಾಗಿ, ಬೂಮ್ರಾಗೆ ನಾಯಕತ್ವ ವಹಿಸುವ ಸಾಧ್ಯತೆ ಬಗ್ಗೆ ಚರ್ಚೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.