ಮೆಲ್ಬರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಇಂದು ಆರಂಭವಾಗಿದೆ. ಒಂದೆಡೆ ಪಂದ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಕ್ರೀಡಾಂಗಣದ ಹೊರಗೆ ಟೀಂ ಇಂಡಿಯಾದ ಅಭಿಮಾನಿಗಳು ಹಾಗೂ ಖಾಲಿಸ್ತಾನ ಪರ ಹೋರಾಟಗಾರರು ವಾಗ್ವಾದ ನಡೆಸಿದ್ದಾರೆ.
ಘಟನೆ ನಡೆದಾಗ ಸ್ಥಳದಲ್ಲಿದ್ದ ಭಾರತದ ಅಭಿಮಾನಿಯೊಬ್ಬರು ಈ ಕುರಿತು ಹೇಳಿಕೆ ನೀಡಿದ್ದಾರೆ.
'ಅವರಿಗೆ (ಖಾಲಿಸ್ತಾನ ಪರ ಘೋಷಣೆ ಕೂಗಿದವರಿಗೆ) ಪ್ರಚಾರ ನೀಡಬಾರದು. ಅವರು ಮಾಡಿದ್ದಕ್ಕೆ ಬೆಲೆಯಿಲ್ಲ. ಇಲ್ಲಿ ಘೋಷಣೆ ಕೂಗಿದ 5–10 ಮಂದಿ ಇಲ್ಲಿಯೇ ಹುಟ್ಟಿ ಬೆಳೆದವರು. ಅವರು ಎಂದಿಗೂ ಪಂಜಾಬ್‌ಗೆ ಹೋಗಿಲ್ಲ. ತಮಗಾಗಿಯೇ, ಇಂತಹ ಅಸಂಬದ್ಧ ಕಾರ್ಯಸೂಚಿ ನಡೆಸುತ್ತಿದ್ದಾರೆ. ಅವರಿಗೆ ಹೆಚ್ಚು ಪ್ರಚಾರ ನೀಡಬಾರದು' ಎಂದು ಹೇಳಿದ್ದಾರೆ.
ಮೊದಲಿಗೆ ಕ್ರೀಡಾಂಗಣದ ಬಳಿ ಜಮಾಯಿಸಿದ್ದ ಖಾಲಿಸ್ತಾನ ಪರ ಗುಂಪು, ಹಳದಿ ಧ್ವಜ ಹಿಡಿದು ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದೆ. ಭಾರತದ ಧ್ವಜವನ್ನು ಫುಟ್‌ಬಾಲ್‌ಗೆ ಸುತ್ತಿ ಕಾಲಿನಿಂದ ಒದ್ದಿದ್ದಾರೆ. ಇದರಿಂದ ಕೆರಳಿದ ಭಾರತದ ಅಭಿಮಾನಿಗಳು, ತ್ರಿವರ್ಣ ಧ್ವಜ ಬೀಸುತ್ತಾ ಘೋಷಣೆಗಳ ಮೂಲಕವೇ ತಿರುಗೇಟು ನೀಡಿದೆ. ಈ ವೇಳೆ ಕೂಡಲೇ ಎಚ್ಚೆತ್ತ ವಿಕ್ಟೋರಿಯಾ ಪೊಲೀಸರು, ಖಾಲಿಸ್ತಾನ ಪರ ಘೋಷಣೆ ಕೂಗುತ್ತಿದ್ದವರನ್ನು ಹೊರಗಟ್ಟುವ ಮೂಲಕ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಆ ಸಂದರ್ಭದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಖಾಲಿಸ್ತಾನ ಪರ ಘೋಷಣೆ ಕೂಗುತ್ತಿದ್ದವರು, ಟಿಕೆಟ್‌ಗಳನ್ನು ಖರೀದಿಸದೆ ಕ್ರೀಡಾಂಗಣದ ಬಳಿಗೆ ಬಂದಿದ್ದರು ಎಂದು ವರದಿಯಾಗಿದೆ.
ಆಸಿಸ್ ಮೇಲುಗೈ
'ಬಾಕ್ಸಿಂಗ್ ಡೇ' ಪಂದ್ಯದ ಮೊದಲ ದಿನದಾಟದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಅಗ್ರ ಕ್ರಮಾಂಕದಲ್ಲಿ ಆಡಿದ ನಾಲ್ವರು ಬ್ಯಾಟರ್‌ಗಳು ಅರ್ಧಶತಕ ಸಿಡಿಸಿದ್ದರಿಂದಾಗಿ, 86 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ.
ಪದಾರ್ಪಣೆ ಪಂದ್ಯವಾಡಿದ ಸ್ಯಾಮ್ ಕೋನ್‌ಸ್ಟಾಸ್ 60 ರನ್ ಗಳಿಸಿದರೆ, ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಅನುಭವಿ ಉಸ್ಮಾನ್ ಖ್ವಾಜಾ 57 ರನ್ ಬಾರಿಸಿದರು. 3ನೇ ಕ್ರಮಾಂಕದಲ್ಲಿ ಆಡಿದ ಮಾರ್ನಸ್ ಲಾಬುಷೇನ್ 72 ರನ್ ಕಲೆಹಾಕಿದರು. ನಂತರ ಬಂದ ಸ್ವೀವ್ ಸ್ಮಿತ್ 68 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಭಾರತದ ಪರ ವೇಗಿ ಜಸ್‌ಪ್ರೀತ್ ಬೂಮ್ರಾ 3 ವಿಕೆಟ್ ಉರುಳಿಸಿದರೆ, ಆಕಾಶ್ ದೀಪ್, ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಒಂದೊಂದು ವಿಕೆಟ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.