ಜಸ್‌ಪ್ರೀತ್ ಬೂಮ್ರಾ
(ಚಿತ್ರ ಕೃಪೆ: X/@BCCI)
ಬ್ರಿಸ್ಬೇನ್: ಪ್ರಸಕ್ತ ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಸ್ಮರಣೀಯವಾಗಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್, ಜಸ್‌ಪ್ರೀತ್ ಬೂಮ್ರಾ ಮಗದೊಂದು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.
ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಬೂಮ್ರಾ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ದಿನದ ಆರಂಭದಲ್ಲೇ ಉಸ್ಮಾನ್ ಖ್ವಾಜಾ ಹಾಗೂ ನೇಥನ್ ಮೆಕ್‌ಸ್ವೀನಿ ಅವರನ್ನು ಹೊರದಬ್ಬಿದ ಬೂಮ್ರಾ ಪರಿಣಾಮಕಾರಿ ದಾಳಿ ಸಂಘಟಿಸಿದರು.
ಈ ನಡುವೆ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಶತಕಗಳನ್ನು ಗಳಿಸುವ ಮೂಲಕ ಭಾರತಕ್ಕೆ ತಿರುಗೇಟು ನೀಡಿದರು.
ಆದರೆ ದಿನದ ಕೊನೆಯ ಅವಧಿಯಲ್ಲಿ ಮತ್ತೆ ನಿಖರ ದಾಳಿ ಸಂಘಟಿಸಿದ ಬೂಮ್ರಾ, ಹೆಡ್, ಸ್ಮಿತ್ ಜತೆಗೆ ಮಿಚೆಲ್ ಮಾರ್ಷ್ ಅವರನ್ನು ಔಟ್ ಮೂಲಕ ಐದು ವಿಕೆಟ್‌ಗಳನ್ನು ಗಳಿಸಿದರು.
ಆ ಮೂಲಕ ಟೆಸ್ಟ್ ವೃತ್ತಿ ಜೀವನದಲ್ಲಿ 12ನೇ ಸಲ ಐದು ವಿಕೆಟ್‌ಗಳ ಸಾಧನೆ ಮಾಡಿದರು.
ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದ ಬೂಮ್ರಾ, ಐದು ವಿಕೆಟ್ ಸೇರಿದಂತೆ ಒಟ್ಟು ಎಂಟು ವಿಕೆಟ್‌ಗಳನ್ನು ಗಳಿಸಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪರ್ತ್ ಪಂದ್ಯದಲ್ಲಿ ಭಾರತ 295 ರನ್‌ಗಳ ಬೃಹತ್ ಗೆಲುವು ದಾಖಲಿಸಿತ್ತು.
ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ 10 ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತಾದರೂ ಬೂಮ್ರಾ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದಿದ್ದರು.
ಈಗ ಗಾಬಾದಲ್ಲೂ ಬೂಮ್ರಾ ಮೋಡಿ ಮಾಡಿದ್ದಾರೆ. ಆದರೆ ವಿಕೆಟ್‌ನ ಇನ್ನೊಂದು ತುದಿಯಿಂದ ಸಹ ಬೌಲರ್‌ಗಳಿಂದ ಉತ್ತಮ ನೆರವು ಸಿಗದ ಕಾರಣ ಟೀಮ್ ಇಂಡಿಯಾ ಹಿನ್ನಡೆಗೊಳಗಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.