ADVERTISEMENT

IND vs AUS: ಡೆಬ್ಯು ವೀರ ವಿಲ್ ಪುಕೊವಸ್ಕಿ ಫಿಫ್ಟಿ; ವಿರಾಮಕ್ಕೆ ಆಸೀಸ್ 93/1

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 9:09 IST
Last Updated 7 ಜನವರಿ 2021, 9:09 IST
ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ವಿಲ್ ಪುಕೊವಸ್ಕಿ
ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ವಿಲ್ ಪುಕೊವಸ್ಕಿ    

ಸಿಡ್ನಿ: ಪ್ರವಾಸಿ ಭಾರತ ವಿರುದ್ಧ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿರುವವಿಲ್ ಪುಕೊವಸ್ಕಿ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ಆತಿಥೇಯ ಆಸ್ಟ್ರೇಲಿಯಾ ತಂಡವು ಟೀ ವಿರಾಮದ ಹೊತ್ತಿಗೆ 31 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 93 ರನ್ ಪೇರಿಸಿದೆ.

ಪದೇ ಪದೇ ಸುರಿಯುತ್ತಿರುವ ಮಳೆಯು ಪಂದ್ಯಕ್ಕೆ ಅಡಚಣೆಯಾಗಿತ್ತು. ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ವಾರ್ನರ್ ಹೊರದಬ್ಬಿದ ಸಿರಾಜ್...
ಗಾಯದಿಂದ ಚೇತರಿಸಿಕೊಂಡಿರುವ ಡೇವಿಡ್ ವಾರ್ನರ್ ಪುನರಾಗಮನಮಾಡಿದ್ದರು. ಅವರನ್ನು ಹೊರದಬ್ಬಿದ ಬಲಗೈ ವೇಗಿ ಮೊಹಮ್ಮದ್ ಸಿರಾಜ್, ಎದುರಾಳಿಗಳಿಗೆ ಆರಂಭಿಕ ಆಘಾತವನ್ನು ನೀಡಿದರು. ಈ ಸಂದರ್ಭದಲ್ಲಿ ಮಳೆ ಸುರಿದ ಪರಿಣಾಮ ಪಂದ್ಯಕ್ಕೆ ಅಡಚಣೆಯಾಗಿತ್ತು. ಈ ವೇಳೆಗೆ ಆಸ್ಟ್ರೇಲಿಯಾ 7.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿತ್ತು.

ಬಳಿಕ ಪಂದ್ಯ ಮುಂದುವರಿಸಿದಾಗ ಆಸೀಸ್ ತಂಡಕ್ಕೆ ವಿಲ್ ಪುಕೊವಸ್ಕಿ ಹಾಗೂ ಮಾರ್ನಸ್ ಲಾಬುಷೇನ್ ಆಸರೆಯಾದರು. ಕೈಚೆಲ್ಲಿದ ಅಮೂಲ್ಯ ಕ್ಯಾಚ್‌ಗಳು ಭಾರತಕ್ಕೆ ಮುಳುವಾಗಿ ಪರಿಣಮಿಸಿತ್ತು.

ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಪುಕೊವಸ್ಕಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಸಾಧನೆ ಮಾಡಿದರು. ಇವರಿಗೆ ಸಾಥ್ ನೀಡುತ್ತಿರುವ ಮಾರ್ನಸ್ ಲಾಬುಷೇನ್ 34 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.

ಸೈನಿ ಡೆಬ್ಯು, ರೋಹಿತ್ ಆರಂಭಿಕ...
ಭಾರತ ತಂಡದಲ್ಲಿ ಯುವ ವೇಗದ ಬೌಲರ್ ನವದೀಪ್ ಸೈನಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಅತ್ತ ಉಪ ನಾಯಕ ಸ್ಥಾನಕ್ಕೆ ಬಡ್ತಿ ಪಡೆದಿರುವ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಇವರಿಗೆ ಕರ್ನಾಟಕದ ಮಯಂಕ್ ಅಗರವಾಲ್ ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ಆಡುವ ಬಳಗ ಇಂತಿದೆ:

ಭಾರತ: ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ.

ಆಸ್ಟ್ರೇಲಿಯಾ: ಟೀಮ್ ಪೇನ್ (ನಾಯಕ–ವಿಕೆಟ್‌ಕೀಪರ್), ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್, ವಿಲ್ ಪುಕೊವಸ್ಕಿ, ಮಾರ್ನಸ್ ಲಾಬುಷೇನ್, ಸ್ಟೀವ್ ಸ್ಮಿತ್, ಕ್ಯಾಮರಾನ್ ಗ್ರೀನ್, ನೇಥನ್ ಲಯನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.