ಸ್ಟೀವ್ ಸ್ಮಿತ್
(ಚಿತ್ರ ಕೃಪೆ: X/@cricketcomau)
ಮೆಲ್ಬರ್ನ್: ಪ್ರವಾಸಿ ಭಾರತ ವಿರುದ್ಧ ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್ ಅಮೋಘ ಶತಕದ ಸಾಧನೆ ಮಾಡಿದ್ದಾರೆ.
ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್ ಎನಿಸಿದ್ದಾರೆ. ಇದು ಭಾರತ ವಿರುದ್ಧ ಸ್ಮಿತ್ ಗಳಿಸಿರುವ 11ನೇ ಟೆಸ್ಟ್ ಶತಕವಾಗಿದೆ.
ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜೋ ರೂಟ್ (10 ಶತಕ) ಅವರನ್ನು ಹಿಂದಿಕ್ಕಿದ್ದಾರೆ.
197 ಎಸೆತಗಳಲ್ಲಿ ಸ್ಮಿತ್ 140 ರನ್ ಗಳಿಸಿ ಅಬ್ಬರಿಸಿದ್ದಾರೆ. ಸ್ಮಿತ್ ಇನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು.
ಸಚಿನ್, ಕೊಹ್ಲಿ ದಾಖಲೆ ಮುರಿದ ಸ್ಮಿತ್...
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್ ಎಂಬ ಕೀರ್ತಿಗೂ ಸ್ಮಿತ್ (10 ಶತಕ) ಭಾಜನರಾಗಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಸ್ಮಿತ್ ಹಿಂದಿಕ್ಕಿದ್ದಾರೆ. ಸಚಿನ್ ಹಾಗೂ ಕೊಹ್ಲಿ ಹೆಸರಲ್ಲಿ ತಲಾ ಒಂಬತ್ತು ಶತಕಗಳಿವೆ.
34ನೇ ಟೆಸ್ಟ್ ಶತಕ; ಗವಾಸ್ಕರ್, ಲಾರಾ ದಾಖಲೆ ಸರಿಗಟ್ಟಿದ ಸ್ಮಿತ್...
ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 34ನೇ ಶತಕದ ಸಾಧನೆ ಮಾಡಿದ್ದಾರೆ. ಆ ಮೂಲಕ ಭಾರತದ ಸುನಿಲ್ ಗವಾಸ್ಕರ್, ವೆಸ್ಟ್‌ಇಂಡೀಸ್‌ನ ಬ್ರಿಯಾನ್ ಲಾರಾ, ಶ್ರೀಲಂಕಾದ ಮಹೇಲಾ ಜಯವರ್ಧನೆ ಮತ್ತು ಪಾಕಿಸ್ತಾನದ ಯೂನಿಸ್ ಖಾನ್ ದಾಖಲೆಯನ್ನು ಸರಿಗಟ್ಟಿದ್ದಾರೆ.
201ನೇ ಇನಿಂಗ್ಸ್‌ನಲ್ಲಿ ಸ್ಮಿತ್ ಈ ಮೈಲಿಗಲ್ಲು ತಲುಪಿದ್ದಾರೆ. ಈ ಹಿಂದೆ ಭಾರತದ ಸಚಿನ್ 192 ಇನಿಂಗ್ಸ್‌ಗಳಲ್ಲಿ 34ನೇ ಟೆಸ್ಟ್ ಶತಕ ಗಳಿಸಿದ್ದರು.
ಆಸ್ಟ್ರೇಲಿಯಾದ ಆಟಗಾರರ ಪೈಕಿ ಮಾಜಿ ನಾಯಕ ರಿಕಿ ಪಾಂಟಿಂಗ್ 193ನೇ ಇನಿಂಗ್ಸ್‌ನಲ್ಲಿ 34 ಶತಕಗಳ ಸಾಧನೆ ಮಾಡಿದ್ದರು.
ಒಟ್ಟಾರೆಯಾಗಿ 113 ಟೆಸ್ಟ್ ಪಂದ್ಯಗಳಲ್ಲಿ ಸ್ಮಿತ್, 56.52ರ ಸರಾಸರಿಯಲ್ಲಿ 9,949 ರನ್ ಗಳಿಸಿದ್ದು, 10,000 ರನ್‌ಗಳ ಸನಿಹದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.