
ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
–ಪಿಟಿಐ ಚಿತ್ರ
ಸಿಡ್ನಿ: ಶನಿವಾರ ಇಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಮತ್ತು ವಿರಾಟ್ ಕೊಹ್ಲಿ ಅವರಿಬ್ಬರನ್ನು ಕೊನೆಯ ಸಲ ಮನದುಂಬಿಕೊಳ್ಳಲು ಭಾವುಕತೆ ತುಂಬಿದ ಸಾವಿರಾರು ಕಂಗಳು ಕಾಯುತ್ತಿವೆ.
ಈ ಇಬ್ಬರು ದಿಗ್ಗಜ ಆಟಗಾರರ ವೃತ್ತಿಜೀವನದ ಸಂಧ್ಯಾಕಾಲ ಇದು. ಬಹುತೇಕ ಇದು ಅವರಿಬ್ಬರ ಕೊನೆಯ ಏಕದಿನ ಪಂದ್ಯವಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಎದುರಿನ ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ವಿರಾಟ್ ಸತತವಾಗಿ ಶೂನ್ಯಕ್ಕೆ ಔಟಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಈ ರೀತಿ ಔಟಾಗಿದ್ದು ಇದೆ ಮೊದಲು.
ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲಿ 97 ಎಸೆತಗಳಲ್ಲಿ 73 ರನ್ ಗಳಿಸಿದರು. ರೋಹಿತ್ ಅವರು 2007–08ರಲ್ಲಿ ಸಿ.ಬಿ. ಸರಣಿಯಲ್ಲಿ ಆಡಲು ಆಸ್ಟ್ರೇಲಿಯಾಕ್ಕೆ ಪ್ರಥಮ ಬಾರಿ ಬಂದಿದ್ದರು. ವಿರಾಟ್ 2011–12ರಲ್ಲಿ ಇಲ್ಲಿಗೆ ಮೊದಲ ಸಲ ಬಂದಾಗ ಅಡಿಲೇಡ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತಕ್ಕೆ ಏಕದಿನ ಕ್ರಿಕೆಟ್ ಸರಣಿ ಇಲ್ಲ. ಆದ್ದರಿಂದ ಮುಂಬರುವ ದಿನಗಳಲ್ಲಿ ರೋಹಿತ್ ಮತ್ತು ವಿರಾಟ್ ಇಲ್ಲಿಗೆ ಬರುವುದಿಲ್ಲ. ಅವರಿಗೆ ಇದು ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಲಿದೆ.
ಸರಣಿಯಲ್ಲಿ ಆಸ್ಟ್ರೇಲಿಯಾ ಈಗಾಗಲೇ 2–0ಯಿಂದ ಮುಂದಿದೆ. ಆದ್ದರಿಂದ ಕೊನೆಯ ಪಂದ್ಯವು ಔಪಚಾರಿಕವಾಗಿದ್ದು, ರೋಹಿತ್ ಮತ್ತು ವಿರಾಟ್ ಅವರ ಅಭಿಮಾನಿಗಳಿಗೆ ಮಾತ್ರ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ವಿರಾಟ್ ಅವರ ಚೆಂದದ ಕವರ್ ಡ್ರೈವ್, ಆನ್‌ಡ್ರೈವ್ ಮತ್ತು ಇನ್‌ಸೈಡ್–ಔಟ್ ಲಾಫ್ಟ್‌ಗಳ ವೈಭವ ಇಲ್ಲಿ ಅರಳಲಿ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಇನ್ನೊಂದೆಡೆ ಕ್ಲೀನ್‌ಸ್ವೀಪ್ ಸೋಲಿನಿಂದ ತಪ್ಪಿಸಿಕೊಳ್ಳುವತ್ತ ಮುಖ್ಯ ಕೋಚ್ ಗೌತಮ್ ಗಂಭೀರ್ ಯೋಜನೆ ಹೆಣೆಯುತ್ತಿದ್ದಾರೆ. ಇನ್ನೆರಡು ವರ್ಷಗಳ ನಂತರ ಏಕದಿನ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಸಿದ್ಧವಾಗುತ್ತಿರುವ ತಂಡವು ಈ ರೀತಿ ಸಾರಾಸಗಟಾಗಿ ಸರಣಿ ಸೋತರೆ ಹೇಗೆ? ಎಸ್.ಸಿ.ಜಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿರುವ ಐದು ಹಣಾಹಣಿಗಳಲ್ಲಿ ಭಾರತ ಒಂದು ಪಂದ್ಯ ಮಾತ್ರ ಗೆದ್ದಿದೆ.
ಕೊಹ್ಲಿ ಅಷ್ಟೇ ಅಲ್ಲ. ನಾಯಕ ಶುಭಮನ್ ಗಿಲ್ ಕೂಡ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳುವ ಒತ್ತಡದಲ್ಲಿದ್ದಾರೆ. ಅಲ್ಲದೇ ಕಣಕ್ಕಿಳಿಯುವ ಹನ್ನೊಂದರ ಬಳಗದಲ್ಲಿ ಕೆಲವು ಬದಲಾವಣೆಗಳತ್ತ ಗಮನ ಹರಿಸುವ ಸಾಧ್ಯತೆಯೂ ಇದೆ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಇದುವರೆಗೂ ಅವಕಾಶ ಸಿಕ್ಕಿಲ್ಲ. ಅಡಿಲೇಡ್‌ನಲ್ಲಿ ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಸ್ಪಿನ್ ಬೌಲಿಂಗ್ ಎದುರಿಸಲು ಆತಿಥೇಯ ಬ್ಯಾಟರ್‌ಗಳು ಪರದಾಡಿದ್ದರು.
ವೇಗಿ ಪ್ರಸಿದ್ಧ ಕೃಷ್ಣ ಅವರನ್ನೂ ಕಣಕ್ಕಿಳಿಸಲು ಇದು ಸೂಕ್ತ ಸಮಯವೆನಿಸುತ್ತದೆ. ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿಲ್ಲ. ವೇಗಿ ಹರ್ಷಿತ್ ರಾಣಾ ಅವರು ಬೌಲಿಂಗ್‌ನಲ್ಲಿ ಅಷ್ಟೇನೂ ಉಪಯುಕ್ತವಾಗಿಲ್ಲ. ಕಳೆದ ಪಂದ್ಯದಲ್ಲಿ ಅವರ ಎರಡು ಮತ್ತು ಮೂರನೇ ಸ್ಪೆಲ್ ಬೌಲಿಂಗ್ ಮಾಡಿದ ರೀತಿಯಲ್ಲಿಯೇ ಅವರಿನ್ನೂ ಅಂತರರಾಷ್ಟ್ರೀಯ ಕ್ರಿಕೆಟ್ ಮಟ್ಟದ ಪೈಪೋಟಿಗೆ ಸಿದ್ಧರಾಗಬೇಕಿದೆ ಎಂಬುದನ್ನು ತೋರಿಸಿದೆ. ಅಕ್ಷರ್ ಪಟೇಲ್ ಮಾತ್ರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉಪಯುಕ್ತರಾಗಿದ್ದಾರೆ.
ಆತಿಥೇಯ ತಂಡದ ಬ್ಯಾಟರ್ ಮ್ಯಾಥ್ಯೂ ಶಾರ್ಟ್, ಮಿಚೆಲ್ ಒವೆನ್ ಮತ್ತು ಕೂಪರ್ ಕೊನೊಲಿ ಅವರು ಎರಡನೇ ಪಂದ್ಯದಲ್ಲಿ ಅಮೋಘವಾಗಿ ಆಡಿದ್ದರು. ಒತ್ತಡದ ಸನ್ನಿವೇಶದಲ್ಲಿ ತಂಡವನ್ನು ಜಯದತ್ತ ಮುನ್ನಡೆಸಿದ್ದರು. ಸ್ಪಿನ್ನರ್ ಆ್ಯಡಂ ಜಂಪಾ ನಾಲ್ಕು ವಿಕೆಟ್ ಗಳಿಸಿದ್ದರು. ಅಗ್ರ ಬ್ಯಾಟರ್ ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಹಾಗೂ ಅಲೆಕ್ಸ್ ಕ್ಯಾರಿ ಅವರು ಲಯಕ್ಕೆ ಮರಳಿದರೆ ತಂಡದ ಬಲ ಹೆಚ್ಚಲಿದೆ.
ಪಂದ್ಯ ಆರಂಭ: ಬೆಳಿಗ್ಗೆ 9
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.