2ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ವೈಖರಿ
ಚಿತ್ರ ಕೃಪೆ: @CricCrazyJohns
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದ ಸಂಕಷ್ಟ ಸಂದರ್ಭದಲ್ಲಿ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಆಕರ್ಷಕ ಅರ್ಧಶತಕ (97 ಎಸೆತಗಳಲ್ಲಿ 73 ರನ್) ಗಳಿಸಿದರು. ಇದರಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳು ಒಳಗೊಂಡಿದ್ದವು. ಈ ಸೊಗಸಾದ ಇನಿಂಗ್ಸ್ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಏಕದಿನ ಕ್ರಿಕೆಟ್‌ನ ಅಧಿಕ ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಅಮೋಘ ಇನಿಂಗ್ಸ್ ಆಡಿದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ಭಾಜನಾರಾದರು. ಅವರು 46 ರನ್ ಗಳಿಸಿದ್ದಾಗ ಗಂಗೂಲಿ ಅವರ 11,221 ರನ್‌ಗಳ ಮೈಲಿಗಲ್ಲನ್ನು ಬ್ರೇಕ್ ಮಾಡಿದರು.
ಭಾರತ ಇನಿಂಗ್ಸ್‌ನ 21ನೇ ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಈ ಸಾಧನೆ ಮಾಡಿದರು. ಗಂಗೂಲಿ 1992 ರಿಂದ 2007ರ ಅವಧಿಯಲ್ಲಿ ಭಾರತದ ಪರ 308 ಏಕದಿನ ಪಂದ್ಯಗಳಲ್ಲಿ 11,221 ರನ್ ಗಳಿಸಿದ್ದಾರೆ. ಈ ವೇಳೆ ಗಂಗೂಲಿ 22 ಶತಕ ಮತ್ತು 71 ಅರ್ಧಶತಕ ಸಿಡಿಸಿದ್ದಾರೆ.
ರೋಹಿತ್ ಶರ್ಮಾ ತಮ್ಮ 275 ನೇ ಏಕದಿನ ಪಂದ್ಯದಲ್ಲಿ 32 ಶತಕ ಹಾಗೂ 59 ಅರ್ಧಶತಗಳ ನೆರವಿನಿಂದ 11,249 ರನ್ ಗಳಿಸುವ ಮೂಲಕ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ 3ನೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (18,426) ಮತ್ತು ವಿರಾಟ್ ಕೊಹ್ಲಿ (14,181) ಅಗ್ರ ಎರಡು ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.