ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ಪ್ರಸಕ್ತ ಸಾಗುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಹನ್ನೊಂದರ ಬಳಗದಲ್ಲಿ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರ ಆಯ್ಕೆಯನ್ನು ಪ್ರಶ್ನೆ ಮಾಡಿದ್ದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಅವರಿಗೆ ನೆಟ್ಟಿಗರು ತಿರುಗೇಟು ನೀಡಿದ್ದಾರೆ.
21 ವರ್ಷದ ನಿತೀಶ್, ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಅಮೋಘ ಶತಕದ ಸಾಧನೆ ಮಾಡಿದ್ದಾರೆ. ಅಲ್ಲದೆ ಪ್ರಸ್ತುತ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಮೋಘ ನಿರ್ವಹಣೆ ನೀಡಿದ್ದಾರೆ.
ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿತೀಶ್‌ಗೆ ಶತಕ ಗಳಿಸಲು ಸಾಧ್ಯವೇ ಎಂದು ಮಾಂಜ್ರೇಕರ್ ಪ್ರಶ್ನೆ ಮಾಡಿದ್ದರು. ಅಲ್ಲದೆ ತಂಡದ ಸಮತೋಲನಕ್ಕಾಗಿ ನಿತೀಶ್ ಕುಮಾರ್ ಅವರನ್ನು ತಂಡದಿಂದ ಕೈಬಿಟ್ಟು ಹೆಚ್ಚುವರಿ ಬೌಲರ್‌ಗೆ ಅವಕಾಶ ನೀಡುವಂತೆ ಹೇಳಿಕೆ ನೀಡಿದ್ದರು.
ಆದರೆ ಎಂಟನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದು ಚೊಚ್ಚಲ ಶತಕ ಗಳಿಸಿರುವ ನಿತೀಶ್, ಆಸೀಸ್ ನೆಲದಲ್ಲಿ ಟೆಸ್ಟ್ ಶತಕ ಗಳಿಸಿದ ಭಾರತದ ಮೂರನೇ ಕಿರಿಯ ಬ್ಯಾಟರ್ ಎನಿಸಿದ್ದಾರೆ. ಆ ಮೂಲಕ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ.
ಕ್ರೀಡಾ ಉತ್ಪನ್ನ ತಯಾರಿಕೆ ಸಂಸ್ಥೆ ಆಗಿರುವ ಪುಮಾ ಸಹ, ಬಾಯಿ ಮುಚ್ಚುವಂತೆ ಸನ್ನೆ ಮಾಡುವ ನಿತೀಶ್ ಕುಮಾರ್ ರೆಡ್ಡಿ ಅವರ ಚಿತ್ರ ಹಂಚಿಕೊಂಡು ಮಾಂಜ್ರೇಕರ್‌ಗೆ ತಕ್ಕ ತಿರುಗೇಟು ನೀಡಿದೆ.
ಮೆಲ್ಬರ್ನ್ ಮೈದಾನದಲ್ಲಿ ಶತಕದ ಬಳಿಕ ನಿತೀಶ್ ಬಗ್ಗೆ ಮಾಂಜ್ರೇಕರ್ ಗುಣಗಾನ ಮಾಡಿದ್ದಾರೆ. ಇದಕ್ಕೆ 'ರಾಜಕಾರಣಿಗಿಂತಲೂ ಮಿಗಿಲಾದ ರಾಜತಾಂತ್ರಿಕ ನೀವು' ಎಂದು 'ಎಕ್ಸ್' ಬಳಕೆದಾರರೊಬ್ಬರು ಜರೆದಿದ್ದಾರೆ.
'ಊಸರವಳ್ಳಿ ತರಹನೇ ಎಷ್ಟು ಬೇಗ ಬಣ್ಣ ಬದಲಾಯಿಸುತ್ತಿದ್ದೀರಾ' ಎಂದು ಮಗದೊಬ್ಬರು ಪ್ರಶ್ನೆ ಮಾಡಿದ್ದಾರೆ.
ಈ ಮೊದಲು ಯಶಸ್ವಿ ಜೈಸ್ವಾಲ್ ಅವರ ರನೌಟ್ ವಿವಾದಕ್ಕೆ ಸಂಬಂಧಿಸಿದಂತೆ ಸಂಜಯ್ ಮಾಂಜ್ರೇಕರ್ ಮತ್ತು ಇರ್ಫಾನ್ ಪಠಾಣ್ ನಡುವೆ, ಲೈವ್ ಟೆಲಿವಿಷನ್ ಕಾರ್ಯಕ್ರಮದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.