ಜಸ್‌ಪ್ರೀತ್ ಬೂಮ್ರಾ
(ಚಿತ್ರ ಕೃಪೆ:X@cricketcomau)
ಸಿಡ್ನಿ: ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾದ ಆಟಗಾರರ ನಡುವಣ ಕಾವೇರಿದ ವಾತಾವರಣ ಸಿಡ್ನಿಯಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಮುಂದುವರಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಕೇವಲ 185ಕ್ಕೆ ಆಲೌಟ್ ಆಯಿತು. ದಿನವಿಡೀ ಭಾರತೀಯ ಬ್ಯಾಟರ್‌ಗಳನ್ನು ಆಸ್ಟ್ರೇಲಿಯಾದ ಬೌಲರ್‌ಗಳು ಮಾರಕವಾಗಿ ಕಾಡಿದರು.
ಇದಕ್ಕೂ ಮಿಗಿಲಾಗಿ ಪದೇ ಪದೇ ಭಾರತೀಯ ಬ್ಯಾಟರ್‌ಗಳನ್ನು ಕೆದಕುವ ಮೂಲಕ ತಾಳ್ಮೆಗೆ ಭಂಗವನ್ನುಂಟು ಮಾಡುವ ಪ್ರಯತ್ನ ಮಾಡಿದರು.
ಇದಾದ ಬಳಿಕ ಆಸ್ಟ್ರೇಲಿಯಾ ಇನಿಂಗ್ಸ್ ಪ್ರಾರಂಭಿಸಿತು. ಈ ವೇಳೆಯೂ 19 ವರ್ಷದ ಸ್ಯಾಮ್ ಕೊನ್‌ಸ್ಟಸ್ ಮತ್ತು ಭಾರತೀಯ ಆಟಗಾರರ ನಡುವೆ ಬಿಸಿ ಬಿಸಿ ಸನ್ನಿವೇಶ ಮುಂದುವರಿಯಿತು.
ಟೀಮ್ ಇಂಡಿಯಾ ನಾಯಕ ಜಸ್‌ಪ್ರೀತ್ ಬೂಮ್ರಾ ಅವರ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಕೊನ್‌ಸ್ಟಸ್ ಅಬ್ಬರಿಸಿದರು.
ನಂತರ ದಿನದಾಟದ ಕೊನೆಯ ಓವರ್‌ನಲ್ಲೂ ನಾನ್-ಸ್ಟ್ರೈಕರ್‌ನಲ್ಲಿದ್ದ ಕೊನ್‌ಸ್ಟಸ್, ಬೂಮ್ರಾ ಜತೆ ಜಗಕ್ಕಿಳಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ಉಂಟಾಯಿತು. ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದಕ್ಕೆ ಉತ್ತರವಾಗಿ ದಿನದಾಟದ ಕೊನೆಯ ಎಸೆತದಲ್ಲೇ ಉಸ್ಮಾನ್ ಖ್ವಾಜಾ (2) ಅವರನ್ನು ಹೊರದಬ್ಬಿದ ಬೂಮ್ರಾ, ವಿಕೆಟ್ ಗಳಿಸಿರುವುದನ್ನು ಸಂಭ್ರಮಿಸದೇ, ನೇರವಾಗಿ ಕೊನ್‌ಸ್ಟಸ್ ಅವರತ್ತ ತೆರಳಿ ದಿಟ್ಟಿಸಿ ನೋಡುತ್ತಾ ಆಕ್ರೋಶವನ್ನು ಹೊರಹಾಕಿದರು.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಕೊನ್‌ಸ್ಟಸ್ ಸಮೀಪದಲ್ಲೇ ಕಿರುಚಾಡಿದರು. ಆ ಮೂಲಕ ಕೆಣಕಲು ಬಂದ ಕೊನ್‌ಸ್ಟಸ್‌ಗೆ ತಕ್ಕ ಉತ್ತರ ನೀಡಿದ್ದಾರೆ.
ಸಾಮಾನ್ಯವಾಗಿ ಶಾಂತಚಿತ್ತರಾಗಿರುವ ಬೂಮ್ರಾ ಅಷ್ಟು ಬೇಗ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆದರೆ ಈ ಘಟನೆಯು ಅಭಿಮಾನಿಗಳಲ್ಲೂ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಸಿಡ್ನಿ ಟೆಸ್ಟ್ ಪಂದ್ಯ ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.