ADVERTISEMENT

ಕಳಪೆ ಫೀಲ್ಡಿಂಗ್: ಭಾರತ ಆಟಗಾರರು ಕ್ರಿಸ್‌ಮಸ್ ಗುಂಗಿನಲ್ಲಿದ್ದಾರೆ ಎಂದ ಗವಾಸ್ಕರ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 15:02 IST
Last Updated 18 ಡಿಸೆಂಬರ್ 2020, 15:02 IST
   

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ 244 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಆತಿಥೇಯ ಬ್ಯಾಟ್ಸ್‌ಮನ್‌ಗಳನ್ನು ಟೀಂ ಇಂಡಿಯಾ ವೇಗಿಗಳು ಇನ್ನಿಲ್ಲದಂತೆ ಕಾಡಿದರು. ಆದರೆ, ಅದಕ್ಕೆ ತಕ್ಕ ಬೆಂಬಲ ಫೀಲ್ಡರ್‌ಗಳಿಂದ ಸಿಗಲಿಲ್ಲ.ಒಟ್ಟು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದರು.

ಸಿಕ್ಕ ಅವಕಾಶಗಳನ್ನು ಬಳಸಿಕೊಂಡ ಮಾರ್ನಸ್‌ ಲಾಬುಶೇನ್ (47; 119ಎ) ಮತ್ತು ನಾಯಕ ಟಿಮ್ ಪೇನ್ (ಔಟಾಗದೆ 73; 99ಎ) ತಂಡದ ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು.

ಮಾರ್ನಸ್‌ ಕ್ಯಾಚ್‌ ಅನ್ನು 18ನೇ ಓವರ್‌ನಲ್ಲಿಜಸ್‌ಪ್ರೀತ್ ಬೂಮ್ರಾ ಮತ್ತು 23ನೇ ಓವರ್‌ನಲ್ಲಿ ಪೃಥ್ವಿ ಶಾ ಕೈಚೆಲ್ಲಿದರು. ಪೇನ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೂ ತಲಾ ಒಂದು ಜೀವದಾನ ಲಭಿಸಿತು. 55ನೇ ಓವರ್‌ನಲ್ಲಿ ಪೇನ್ ಕೊಟ್ಟ ಕ್ಯಾಚ್ ಪಡೆಯುವಲ್ಲಿ ಮಯಂಕ್ ಅಗರವಾಲ್ ವಿಫಲರಾದರು. ಅದರಿಂದಾಗಿ ಅವರು ಅರ್ಧಶತಕ ಗಳಿಸಲು ಸಾಧ್ಯವಾಯಿತು.

ADVERTISEMENT

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸುನೀಲ್‌ ಗವಾಸ್ಕರ್‌, ‘ಭಾರತೀಯರು (ಟೀಂ ಇಂಡಿಯಾ ಆಟಗಾರರು) ಕ್ರಿಸ್‌ಮಸ್‌ ಮೂಡ್‌ನಲ್ಲಿದ್ದಾರೆ ಎಂದು ಭಾವಿಸುತ್ತೇನೆ. ಅವರು ತಮ್ಮ ಉಡುಗೊರೆಗಳನ್ನು ಒಂದು ವಾರದ ಮೊದಲೇ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಭಾರತ ತಂಡ ವಿರಾಟ್‌ ಕೊಹ್ಲಿ (74), ಚೇತೇಶ್ವರ ಪೂಜಾರ (43) ಮತ್ತು ಅಜಿಂಕ್ಯ ರಹಾನೆ (42) ಬ್ಯಾಟಿಂಗ್ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 244 ರನ್ ಗಳಿಸಿದೆ. ಆಸ್ಟ್ರೇಲಿಯಾ 191 ರನ್‌ಗಳಿಗೆ ಆಲೌಟ್‌ ಆಗಿದೆ. ಭಾರತ ಪರ ಮಿಂಚಿದ ರವಿಚಂದ್ರನ್‌ ಅಶ್ವಿನ್‌ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರೆ, ಉಮೇಶ್‌ ಯಾದವ್‌ 3 ಹಾಗೂ ಜಸ್‌ಪ್ರೀತ್‌ ಬೂಮ್ರಾ ಎರಡು ವಿಕೆಟ್‌ ಕಬಳಿಸಿದರು.

53 ರನ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 9 ರನ್ ಗಳಿಸಿದೆ. ಕೊಹ್ಲಿ ಪಡೆಗೆ 62 ರನ್ ಮುನ್ನಡೆ ಲಭಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಪೃಥ್ವಿ ಶಾ ಈ ಬಾರಿಯೂ ನಿರಾಸೆ ಮೂಡಿಸಿದರು. ಕೇವಲ 4 ರನ್ ಗಳಿಸಿದ್ದ ವೇಳೆ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಸದ್ಯ ನೈಟ್‌ ವಾಚ್‌ಮನ್‌ ಜಸ್‌ಪ್ರೀತ್ ಬೂಮ್ರಾ ಕ್ರೀಸ್‌ಗೆ ಬಂದಿದ್ದು, ಮಯಂಕ್‌ ಅಗರವಾಲ್‌ (4) ಜೊತೆಗೆ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.