ADVERTISEMENT

Cricket | ಅಡಿಲೇಡ್‌ನಲ್ಲೂ ವಿಫಲ: ವಿದಾಯದ ಸುಳಿವು ನೀಡಿದರೇ ವಿರಾಟ್ ಕೊಹ್ಲಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2025, 7:12 IST
Last Updated 23 ಅಕ್ಟೋಬರ್ 2025, 7:12 IST
<div class="paragraphs"><p>ಪೆವಿಲಿನ್‌ನತ್ತ ಹೆಜ್ಜೆ ಇಟ್ಟ ವಿರಾಟ್‌ ಕೊಹ್ಲಿ</p></div>

ಪೆವಿಲಿನ್‌ನತ್ತ ಹೆಜ್ಜೆ ಇಟ್ಟ ವಿರಾಟ್‌ ಕೊಹ್ಲಿ

   

ಕೃಪೆ: X / @onhssoccer

ಅಡಿಲೇಡ್‌: ಏಳು ತಿಂಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಮರಳಿರುವ ವಿರಾಟ್‌ ಕೊಹ್ಲಿ ಅವರ ಬ್ಯಾಟ್‌ ಸದ್ದು ಮಾಡುತ್ತಿಲ್ಲ.

ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ 8 ಎಸೆತಗಳನ್ನು ಆಡಿಯೂ ಖಾತೆ ತೆರೆಯಲು ವಿಫಲವಾಗಿದ್ದ ಅವರು, ಇಂದು ಎರಡನೇ ಪಂದ್ಯದಲ್ಲಿ 4 ಎಸೆತಗಳಲ್ಲಿ ಸೊನ್ನೆ ಸುತ್ತಿದ್ದಾರೆ. ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 40ನೇ ಸಲ ಶೂನ್ಯಕ್ಕೆ ಔಟಾದ ಅಪಖ್ಯಾತಿಗೊಳಗಾಗಿದ್ದಾರೆ.

ಟೆಸ್ಟ್‌ ಮತ್ತು ಟಿ20 ಮಾದರಿಗೆ ಈಗಾಗಲೇ ವಿದಾಯ ಹೇಳಿರುವ ಕೊಹ್ಲಿ, ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಪ್ರಸ್ತುತ ಸರಣಿಯಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂಬುದು ಮುಂದಿನ ಹಾದಿಯನ್ನು ನಿರ್ಧರಿಸುವ ಸಾಧ್ಯತೆ ಇದೆ.

ನಿವೃತ್ತಿ ಸುಳಿವು ನೀಡಿದರೇ ಕೊಹ್ಲಿ?
ಕೊಹ್ಲಿ, ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕ್ಯಾಚಿತ್ತು ನಿರ್ಗಮಿಸಿದ್ದರು. ವೇಗಿ ಮಿಚೇಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಆಫ್‌ ಸೈಡ್‌ನತ್ತ ನುಗ್ಗುತ್ತಿದ್ದ ಚೆಂಡನ್ನು ಬಲವಾಗಿ ಡ್ರೈವ್‌ ಮಾಡಲು ಹೋಗಿ ಬೆಲೆ ತೆತ್ತಿದ್ದರು. ಬ್ಯಾಟಿನ ಅಂಚಿಗೆ ತಾಗಿದ ಚೆಂಡು ಅಂದುಕೊಂಡಂತೆ ಹೋಗಿರಲಿಲ್ಲ. ಪಾಯಿಂಟ್‌ನತ್ತ ಹಾರಿದ ಚೆಂಡನ್ನು ಕೂಪರ್‌ ಕನೋಲಿ ಎಡಕ್ಕೆ ಜಿಗಿದು ಅದ್ಭುತವಾಗಿ ಹಿಡಿದಿದ್ದರು.

ಇಂದು ಅಡಿಲೇಡ್‌ನಲ್ಲಿ ಷೇವಿಯರ್‌ ಬರ್ಟ್ಲೆಟ್‌ ಹಾಕಿದ ಎಸೆತದ ಗತಿ ಅಂದಾಜಿಸುವಲ್ಲಿ ವಿಫಲವಾಗಿ, ಎಲ್‌ಬಿ ಬಲೆಗೆ ಬಿದ್ದಿದ್ದಾರೆ.

ಸತತ ಎರಡನೇ ಪಂದ್ಯದಲ್ಲಿ ಡಕ್‌ ಔಟ್‌ ಆದ ಕೊಹ್ಲಿ, ಪೆವಿಲಿಯನ್‌ನತ್ತ ಮರಳುವ ವೇಳೆ ಅಭಿಮಾನಿಗಳತ್ತ ಕೈ ಬೀಸಿರುವುದು ಚರ್ಚೆ ಹುಟ್ಟುಹಾಕಿದೆ.

ಬೌಂಡರಿ ಗೆರೆ ಸಮೀಪಿಸುತ್ತಿದ್ದಂತೆ ಅವರು, ತಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸುವಂತೆ ತಮ್ಮ ಗ್ಲೌಗಳನ್ನು ಮೇಲೆತ್ತಿ ತೋರಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.

ಕೊಹ್ಲಿ ಶೀಘ್ರದಲ್ಲೇ ನಿವೃತ್ತಿ ಘೋಷಿಸಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಡಿಲೇಡ್‌ನಲ್ಲಿ ಈ ಹಿಂದೆ ಕ್ರಿಕೆಟ್‌ನ ಮೂರೂ ಮಾದರಿಯ ಪಂದ್ಯಗಳಲ್ಲಿ ಒಟ್ಟು 17 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದ ಕೊಹ್ಲಿ, 975 ರನ್‌ ಗಳಿಸಿದ್ದರು. ಅದರಲ್ಲಿ ಐದು ಶತಕ ಹಾಗೂ ನಾಲ್ಕು ಅರ್ಧಶತಕಗಳು ಸೇರಿವೆ. ಒಮ್ಮೆಯೂ 'ಸೊನ್ನೆ' ಸುತ್ತಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.