ADVERTISEMENT

IND vs AUS: ಸಿಡ್ನಿ ಟೆಸ್ಟ್ ರೋಹಿತ್ ಪಾಲಿಗೆ ಕೊನೆಯ ಪಂದ್ಯ ಆಗಿರಲಿದೆಯೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2024, 13:39 IST
Last Updated 27 ಡಿಸೆಂಬರ್ 2024, 13:39 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

(ಪಿಟಿಐ ಚಿತ್ರ)

ಮೆಲ್ಬರ್ನ್: ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಕಳಪೆ ಬ್ಯಾಟಿಂಗ್ ಲಯ ಮುಂದುವರಿದಿದೆ. ಇದರೊಂದಿಗೆ ಮುಂಬರುವ ಸಿಡ್ನಿ ಪಂದ್ಯ ರೋಹಿತ್ ಪಾಲಿಗೆ ಕೊನೆಯ ಪಂದ್ಯ ಆಗಿರಲಿದೆಯೇ ಎಂಬ ಅನುಮಾನ ಕ್ರಿಕೆಟ್ ವಲಯದಲ್ಲಿ ಹುಟ್ಟಿದೆ.

ADVERTISEMENT

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸತತ ವೈಫಲ್ಯ ಕಂಡಿರುವ ರೋಹಿತ್, ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲೂ ವೈಫಲ್ಯ ಅನುಭವಿಸಿದ್ದಾರೆ.

ಪಿತೃತ್ವದ ರಜೆಯಿಂದಾಗಿ ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಆಡಿರಲಿಲ್ಲ. ಜಸ್‌ಪ್ರೀತ್ ಬೂಮ್ರಾ ನಾಯಕತ್ವದಲ್ಲಿ ಭಾರತ 295 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ನಾಯಕತ್ವಕ್ಕೆ ಮರಳಿದರೂ, ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು.

ಆಗಲೇ ಆರಂಭಿಕನಾಗಿ ಛಾಪು ಒತ್ತಿದ ಕೆ.ಎಲ್.ರಾಹುಲ್‌ಗೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಿದ್ದ ರೋಹಿತ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಮೊದಲ ಇನಿಂಗ್ಸ್‌ನಲ್ಲಿ ಮೂರು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಆರು ರನ್ ಗಳಿಸಿ ಔಟ್ ಆಗಿದ್ದರು.

ಮಳೆ ಬಾಧಿತ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲೂ ರೋಹಿತ್ ವೈಫಲ್ಯ ಮುಂದುವರಿಯಿತು. ಕೇವಲ 10 ರನ್ ಗಳಿಸಿ ಔಟ್ ಆದರು. ಆದಾಗ್ಯೂ ಪಂದ್ಯ ಡ್ರಾ ಮಾಡುವಲ್ಲಿ ಭಾರತ ಯಶಸ್ವಿಯಾಯಿತು.

ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಆರಂಭಿಕನಾಗಿ ಕ್ರೀಸಿಗೆ ಇಳಿದಿರುವ ರೋಹಿತ್ 3 ರನ್ ಗಳಿಸಿ ಔಟ್ ಆಗಿದ್ದಾರೆ. ಇದರಿಂದಾಗಿ ರೋಹಿತ್ ವಿರುದ್ಧ ಭಾರಿ ಟೀಕೆಗಳು ಎದುರಾಗುತ್ತಿವೆ.

38 ವರ್ಷದ ರೋಹಿತ್ ಶರ್ಮಾ ನಿವೃತ್ತಿ ಪಡೆಯಬೇಕು ಎಂದು ಕೆಲವರು ಬಯಸಿದ್ದಾರೆ.

ಮುಂಬರುವ ಸಿಡ್ನಿ ಪಂದ್ಯಕ್ಕೂ ಮುನ್ನ ರೋಹಿತ್‌ಗೆ ಇನ್ನೊಂದು ಅವಕಾಶ ಮಾತ್ರ ಸಿಗಲಿದೆ. ಎರಡನೇ ಇನಿಂಗ್ಸ್‌ನಲ್ಲಿ ರೋಹಿತ್ ಲಯಕ್ಕೆ ಮರಳುವರೇ ಎಂದು ಕಾದು ನೋಡಬೇಕಿದೆ.

ರೋಹಿತ್ ಕೆಟ್ಟ ಪ್ರದರ್ಶನದ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ನಾಯಕ ಸುನಿಲ್ ಗವಾಸ್ಕರ್, 'ಹಿಟ್‌ಮ್ಯಾನ್‌ಗಿದು ಕಠಿಣ ಸಮಯ. ಈ ಪಂದ್ಯದಲ್ಲಿ ಇನ್ನೊಂದು ಇನಿಂಗ್ಸ್ ಮತ್ತು ಸಿಡ್ನಿಯಲ್ಲಿ ಇನ್ನೆರಡು ಅವಕಾಶಗಳು ಮಾತ್ರ ಸಿಗಲಿವೆ. ಈ ಮೂರು ಇನಿಂಗ್ಸ್‌ಗಳಲ್ಲಿ ರನ್ ಗಳಿಸದಿದ್ದರೆ ಪ್ರಶ್ನೆಗಳು ಎದುರಾಗಲಿವೆ' ಎಂದು ಹೇಳಿದ್ದಾರೆ.

ರೋಹಿತ್ ಈ ವರ್ಷ ಎಂಟು ಟೆಸ್ಟ್ ಪಂದ್ಯಗಳಲ್ಲಿ (14 ಇನಿಂಗ್ಸ್) 11.07ರ ಸರಾಸರಿಯಲ್ಲಿ 155 ರನ್ ಮಾತ್ರ ಗಳಿಸಿದ್ದಾರೆ. ಹಾಗೊಂದು ವೇಳೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಪ್ರವೇಶಿಸುವಲ್ಲಿ ಭಾರತ ವಿಫಲವಾದರೆ ಸಿಡ್ನಿ ಟೆಸ್ಟ್ ರೋಹಿತ್ ಪಾಲಿಗೆ ಕೊನೆಯ ಪಂದ್ಯ ಆಗಿರಲಿದೆಯೇ ಎಂಬ ಪ್ರಶ್ನೆ ದಟ್ಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.