ADVERTISEMENT

ಆಸ್ಟ್ರೇಲಿಯಾ ವಿರುದ್ಧ ಮತ್ತೆ ಮಿಂಚಿದ ಜಡೇಜ; 2ನೇ ಟೆಸ್ಟ್‌ನಲ್ಲೂ ಭಾರತಕ್ಕೆ ಜಯ

ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2023, 10:01 IST
Last Updated 19 ಫೆಬ್ರುವರಿ 2023, 10:01 IST
ಚೇತೇಶ್ವರ ಪೂಜಾರ ಹಾಗೂ ಕೆ.ಎಸ್‌.ಭರತ್‌ ಅವರನ್ನು ಅಭಿನಂದಿಸಿದ ಸೂರ್ಯಕುಮಾರ್‌ ಯಾದವ್‌ ಮತ್ತು ರೋಹಿತ್ ಶರ್ಮಾ (ಪಿಟಿಐ ಚಿತ್ರ)
ಚೇತೇಶ್ವರ ಪೂಜಾರ ಹಾಗೂ ಕೆ.ಎಸ್‌.ಭರತ್‌ ಅವರನ್ನು ಅಭಿನಂದಿಸಿದ ಸೂರ್ಯಕುಮಾರ್‌ ಯಾದವ್‌ ಮತ್ತು ರೋಹಿತ್ ಶರ್ಮಾ (ಪಿಟಿಐ ಚಿತ್ರ)   

ನವದೆಹಲಿ: ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲೂ ಆತಿಥೇಯ ಭಾರತ ತಂಡ ಗೆಲುವು ಸಾಧಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ 2–0 ಅಂತರದ ಮುನ್ನಡೆ ಸಾಧಿಸಿದೆ.

ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪಡೆ 263 ರನ್ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಮಾಡಿದ ಭಾರತ 262 ರನ್‌ ಗಳಿಗೆ ಸರ್ವಪತನ ಕಂಡಿತ್ತು.

ಕೇವಲ 1 ರನ್‌ ಅಂತರದ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಪ್ರವಾಸಿ ತಂಡ, 113 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ 115 ರನ್‌ಗಳ ಸಾಧಾರಣ ಗುರಿ ಪಡೆದ ಟೀಂ ಇಂಡಿಯಾ 4 ವಿಕೆಟ್‌ ನಷ್ಟಕ್ಕೆ 114 ರನ್‌ ಗಳಿಸಿತು.

ADVERTISEMENT

ಜಡೇಜಗೆ 2ನೇ 'ಪಂದ್ಯಶ್ರೇಷ್ಠ ಪ್ರಶಸ್ತಿ'
ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 3 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಸೇರಿ ಒಟ್ಟು 10 ವಿಕೆಟ್‌ ಪಡೆದ ಸ್ಪಿನ್ನರ್‌ ರವೀಂದ್ರ ಜಡೇಜ ಪಂದ್ಯ ಶ್ರೇಷ್ಠ ಎನಿಸಿದರು. ಅವರು ಮೊದಲ ಪಂದ್ಯದಲ್ಲೂ ಈ ಪ್ರಶಸ್ತಿ ಗಿಟ್ಟಿಸಿದ್ದರು. 7 ವಿಕೆಟ್ ಉರುಳಿಸಿ ಹಾಗೂ 70 ರನ್‌ ಸಿಡಿಸಿ ಅವರು ಮಿಂಚಿದ್ದರು.

ಪೂಜಾರ ಅಪರೂಪದ ಸಾಧನೆ
115 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ಪರ ಅಜೇಯ 31 ರನ್‌ ಗಳಿಸಿದ ಚೇತೇಶ್ವರ ಪೂಜಾರ ಅಪರೂಪದ ಸಾಧನೆ ಮಾಡಿದರು. 100ನೇ ಪಂದ್ಯದಲ್ಲಿ ಗೆಲುವಿನ ರನ್ ಗಳಿಸಿದ ಎರಡನೇ ಬ್ಯಾಟರ್‌ ಎನಿಸಿದರು. ಅವರು ಗೆಲುವಿಗೆ ಇನ್ನು 1 ರನ್‌ ಬೇಕಿದ್ದಾಗ ಬೌಂಡರಿ ಗಳಿಸಿ ಈ ಸಾಧನೆ ಮಾಡಿದರು.

ಈ ಹಿಂದೆ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ರಿಕಿ ಪಾಂಟಿಂಗ್‌ ಅವರು ತಾವಾಡಿದ ನೂರನೇ ಪಂದ್ಯದಲ್ಲಿ ಬೌಂಡರಿ ಬಾರಿಸಿ ಜಯದ ರನ್ ಗಳಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಸಿಡ್ನಿಯಲ್ಲಿ 2006ರಲ್ಲಿ ಆ ಪಂದ್ಯ ನಡೆದಿತ್ತು.

ಕ್ರೀಡಾಂಗಣವೊಂದರಲ್ಲಿ ಸತತ 13ನೇ ಜಯ
ಈ ಗೆಲುವಿನೊಂದಿಗೆ ಭಾರತ ತಂಡವು ತವರಿನ ಮೂರನೇ ಕ್ರೀಡಾಂಗಣದಲ್ಲಿ ಸತತ 13ನೇ ಜಯ ಗಳಿಸಿದ ಸಾಧನೆ ಮಾಡಿತು. ದೆಹಲಿ ಕ್ರೀಡಾಂಗಣದಲ್ಲಿ 1993ರಿಂದ ಈ ವರಗೆ ಆಡಿರುವ ಎಲ್ಲ (13) ಪಂದ್ಯಗಳಲ್ಲಿ ಸತತವಾಗಿ ಗೆಲುವು ಕಂಡಿರುವ ಭಾರತ, ಮೊಹಾಲಿಯಲ್ಲಿಯೂ 1997 ರಿಂದ ಈ ವರಗೆ 13 ಪಂದ್ಯಗಳನ್ನು ಗೆದ್ದಿದೆ.

ಮುಂಬೈನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ 1948ರಿಂದ 1965ರ ವರೆಗೆ 13 ಮತ್ತು ಕಾನ್ಪುರದಲ್ಲಿ 1959ರಿಂದ 1982ರ ವರೆಗೆ 11 ಜಯ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.