ADVERTISEMENT

ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ವಿಕೆಟ್; ಜಹೀರ್ ಖಾನ್ ಹಿಂದಿಕ್ಕಿದ ಮೊಹಮ್ಮದ್ ಶಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2025, 13:46 IST
Last Updated 20 ಫೆಬ್ರುವರಿ 2025, 13:46 IST
   

ದುಬೈ: ಭಾರತ ಕ್ರಿಕೆಟ್‌ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, ಈ ಬಾರಿಯ ಚಾಂಪಿಯನ್ಸ್‌ ಟ್ರೊಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಆಡಿದ ಮೊದಲ ಪಂದ್ಯದಲ್ಲೇ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಬಾಂಗ್ಲಾದೇಶ ವಿರುದ್ಧ ದುಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 10 ಓವರ್‌ಗಳಲ್ಲಿ 53 ರನ್‌ ನೀಡಿ ಐದು ವಿಕೆಟ್‌ಗಳನ್ನು ಕಬಳಿಸಿದ ಶಮಿ, ಐಸಿಸಿ ಕ್ರೀಡಾಕೂಟಗಳಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ ಎಂಬ ಶ್ರೇಯಕ್ಕೆ ಭಾಜನರಾದರು.

ಈವರೆಗೆ ಈ ದಾಖಲೆ ಮಾಜಿ ವೇಗಿ ಜಹೀರ್‌ ಖಾನ್‌ ಹೆಸರಲ್ಲಿತ್ತು. ಅವರು 32 ಇನಿಂಗ್ಸ್‌ಗಳಲ್ಲಿ 59 ವಿಕೆಟ್‌ ಕಬಳಿಸಿದ್ದರು. ಸದ್ಯ 60 ವಿಕೆಟ್‌ ಉರುಳಿಸಿ ನಂ.1 ಸ್ಥಾನಕ್ಕೇರಿರುವ ಶಮಿ, ಈವರೆಗೆ ಆಡಿರುವುದು ಕೇವಲ 19 ಇನಿಂಗ್ಸ್‌.

ADVERTISEMENT

ವಿಶೇಷವೆಂದರೆ, ಶಮಿ ಪಾಲಿಗೆ ಇದು ಮೊದಲ ಚಾಂಪಿಯನ್ಸ್‌ ಟ್ರೋಫಿ ಪಂದ್ಯವಾಗಿದೆ. ಮೂರು ಆವೃತ್ತಿಯ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಆಡಿರುವ ಅವರು ಒಟ್ಟು 55 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ (ಎಸೆತಗಳ ಆಧಾರದಲ್ಲಿ) ವೇಗವಾಗಿ 200 ವಿಕೆಟ್‌ ಕಬಳಿಸಿದ ಶ್ರೇಯಕ್ಕೂ ಭಾಜನರಾದ ಶಮಿ, ಈ ಮಾದರಿಯಲ್ಲಿ ಆರನೇ ಸಲ ಐದು ವಿಕೆಟ್‌ ಗೊಂಚಲು ಸಾಧನೆ ಮಾಡಿದರು. ಭಾರತ ಪರ ಜಾವಗಲ್‌ ಶ್ರೀನಾಥ್‌ ಮತ್ತು ಹರ್ಭಜನ್‌ ಸಿಂಗ್ ಅವರು ತಲಾ ಮೂರು ಸಲ ಈ ಸಾಧನೆ ಮಾಡಿದ್ದಾರೆ.

ವಿಶ್ವಕಪ್‌ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹೆಚ್ಚು ವಿಕೆಟ್‌

  • 60 ವಿಕೆಟ್‌: ಮೊಹಮ್ಮದ್‌ ಶಮಿ

  • 59 ವಿಕೆಟ್‌: ಜಹೀರ್‌ ಖಾನ್

  • 47 ವಿಕೆಟ್‌: ಜಾವಗಲ್‌ ಶ್ರೀನಾಥ್‌

  • 43 ವಿಕೆಟ್‌: ರವೀಂದ್ರ ಜಡೇಜ

ವೇಗವಾಗಿ 200 ವಿಕೆಟ್‌ ಪಡೆದವರು

  • ಮೊಹಮ್ಮದ್‌ ಶಮಿ: 5,126 ಎಸೆತ

  • ಮಿಚೇಲ್‌ ಸ್ಟಾರ್ಕ್‌: 5,240 ಎಸೆತ

  • ಸಕ್ಲೇನ್‌ ಮುಸ್ತಾಕ್‌: 5,451 ಎಸೆತ

  • ಬ್ರೆಟ್‌ ಲೀ: 5,640 ಎಸೆತ

  • ಟ್ರೆಂಟ್‌ ಬೌಲ್ಟ್‌: 5,783 ಎಸೆತ

  • ವಕಾರ್‌ ಯೂನಿಸ್‌: 5,883 ಎಸೆತ

ಭಾರತಕ್ಕೆ 229 ರನ್ ಗುರಿ
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ 228 ರನ್‌ ಗಳಿಸಿ ಆಲೌಟ್ ಆಗಿದೆ. ಈ ಗುರಿ ಬೆನ್ನತ್ತಿರುವ ಭಾರತ 8 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 51 ರನ್‌ ಗಳಿಸಿದೆ. ನಾಯಕ ರೋಹಿತ್‌ ಶರ್ಮಾ (37 ರನ್‌) ಮತ್ತು ಉಪನಾಯಕ ಶುಭಮನ್ ಗಿಲ್‌ (14 ರನ್‌) ಕ್ರೀಸ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.