ಇಂಗ್ಲೆಂಡ್ ತಂಡದ ಗೆಲುವಿನ ಕ್ಷಣ
(ರಾಯಿಟರ್ಸ್ ಚಿತ್ರ)
ಲೀಡ್ಸ್: ಪ್ರವಾಸಿ ಭಾರತ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಜಯ ಗಳಿಸಿರುವ ಇಂಗ್ಲೆಂಡ್, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
371 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಬೆನ್ ಡಕೆಟ್ ಅಮೋಘ ಶತಕದ (149) ಬೆಂಬಲದೊಂದಿಗೆ ಐದು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತು.
ಐದು ಶತಕಗಳನ್ನು ಗಳಿಸಿಯೂ ಸೋಲು...
ಒಂದೇ ಟೆಸ್ಟ್ ಪಂದ್ಯದಲ್ಲಿ ಭಾರತ ಐದು ಶತಕಗಳನ್ನು ಗಳಿಸಿಯೂ ಸೋಲಿನ ಅಪಖ್ಯಾತಿಗೆ ಒಳಗಾಯಿತು. ಅಲ್ಲದೆ ಟೆಸ್ಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಐದು ಶತಕಗಳನ್ನು ಗಳಿಸಿಯೂ ಸೋಲಿಗೆ ಒಳಗಾದ ತಂಡವೆನಿಸಿತು.
ಮೊದಲ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ (101), ಶುಭಮನ್ ಗಿಲ್ (147) ಮತ್ತು ರಿಷಭ್ ಪಂತ್ (134) ಶತಕ ಗಳಿಸಿದ್ದರೆ ಎರಡನೇ ಇನಿಂಗ್ಸ್‌ನಲ್ಲಿ ಪಂತ್ (118) ಮತ್ತು ಕೆ.ಎಲ್. ರಾಹುಲ್ (137) ಶತಕ ದಾಖಲಿಸಿದ್ದರು. ಈ ಪೈಕಿ ಪಂತ್ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ್ದರು.
ಪಂದ್ಯದಲ್ಲಿ ಒಟ್ಟು 7 ಶತಕ...
ಆಂಗ್ಲರ ಪರ ಮೊದಲ ಇನಿಂಗ್ಸ್‌ನಲ್ಲಿ ಒಲಿ ಪೋಪ್ (106) ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಬೆನ್ ಡಕೆಟ್ (149) ಸೆಂಚುರಿ ಗಳಿಸಿದರು. ಈ ಪಂದ್ಯದಲ್ಲಿ ಒಟ್ಟು ಏಳು ಶತಕಗಳು ದಾಖಲಾದವು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಹ್ಯಾರಿ ಬ್ರೂಕ್ ಕೇವಲ ಒಂದು ರನ್‌ನಿಂದ ಶತಕ ವಂಚಿತರಾದರು.
ಇಂಗ್ಲೆಂಡ್‌ನ 2ನೇ ಅತ್ಯಂತ ಯಶಸ್ವಿ ರನ್ ಬೇಟೆ...
ಇದು ಇಂಗ್ಲೆಂಡ್ ಯಶಸ್ವಿಯಾಗಿ ಬೆನ್ನಟ್ಟಿದ ಎರಡನೇ ದೊಡ್ಡ ಗುರಿ ಎನಿಸಿತು. ಈ ಹಿಂದೆ 2022ರ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧವೇ ಮೂರು ವಿಕೆಟ್ ನಷ್ಟಕ್ಕೆ 378 ರನ್ ಬೆನ್ನಟ್ಟಿತ್ತು.
ಭಾರತ ದಿಢೀರ್ ಪತನ...
ಮೊದಲ ಇನಿಂಗ್ಸ್‌ನಲ್ಲಿ ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 41 ರನ್ ಅಂತರದಲ್ಲಿ ಕಳೆದುಕೊಂಡಿದ್ದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 31 ರನ್ ಅಂತರದಲ್ಲಿ ಅಂತಿಮದ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದುವೇ ಸೋಲಿಗೆ ಕಾರಣವಾಯಿತು. ಕೈಚೆಲ್ಲಿದ ಹಲವು ಕ್ಯಾಚ್‌ಗಳಿಂದಲೂ ಹಿನ್ನಡೆ ಎದುರಾಯಿತು.
ಇನಿಂಗ್ಸ್ ಮುನ್ನಡೆಯ ಹೊರತಾಗಿಯೂ ಸೋಲು...
ಮೊದಲ ಇನಿಂಗ್ಸ್‌ನಲ್ಲಿ ಭಾರತದ 471 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ 465 ರನ್ನಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಆರು ರನ್ ಅಂತರದ ಅಲ್ಪ ಮುನ್ನಡೆ ಗಳಿಸಿತ್ತು. ಇನಿಂಗ್ಸ್ ಮುನ್ನಡೆ ಗಳಿಸಿದರ ಹೊರತಾಗಿಯೂ ಭಾರತಕ್ಕೆ ಸೋಲು ಎದುರಾಯಿತು.
ಬೂಮ್ರಾ ಐದು ವಿಕೆಟ್ ಸಾಧನೆ...
ಮೊದಲ ಇನಿಂಗ್ಸ್‌ನಲ್ಲಿ ಐದು (83ಕ್ಕೆ 5) ವಿಕೆಟ್ ಗಳಿಸಿದ್ದ ಬೂಮ್ರಾ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ಗಳಿಸಲು ವಿಫಲರಾದರು. ಇಂಗ್ಲೆಂಡ್ ಬ್ಯಾಟರ್‌ಗಳು ಬಹಳ ಎಚ್ಚರಿಕೆಯಿಂದ ಬೂಮ್ರಾ ಅವರನ್ನು ಎದುರಿಸುವಲ್ಲಿ ಯಶ ಕಂಡರು.
ಕೊನೆಯ ದಿನ 350 ರನ್ ಚೇಸ್...
ಇಂಗ್ಲೆಂಡ್ ಟೆಸ್ಟ್ ಪಂದ್ಯವೊಂದರ ಅಂತಿಮ ದಿನದಾಟದಲ್ಲಿ 350 ಅಥವಾ ಅದಕ್ಕಿಂತಲೂ ಹೆಚ್ಚು ರನ್ ಚೇಸ್ ಮಾಡಿದ ಎರಡನೇ ತಂಡವೆನಿಸಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 21 ರನ್ ಗಳಿಸಿದ್ದ ಇಂಗ್ಲೆಂಡ್ ಗೆಲುವಿಗೆ ಅಂತಿಮ ದಿನದಾಟದಲ್ಲಿ ಭರ್ತಿ 350 ರನ್ ಬೇಕಿತ್ತು. ಈ ಹಿಂದೆ 1948ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಅಂತಿಮ ದಿನದಲ್ಲಿ 404 ರನ್ ಬೆನ್ನಟ್ಟಿತ್ತು.
ಒಟ್ಟು 835 ರನ್ ಗಳಿಸಿಯೂ ಸೋಲು...
ಭಾರತ ಮೊದಲ ಇನಿಂಗ್ಸ್‌ನಲ್ಲಿ 471 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 364 ಸೇರಿದಂತೆ ಪಂದ್ಯದಲ್ಲಿ ಒಟ್ಟು 835 ರನ್ ಪೇರಿಸಿಯೂ ಸೋಲು ಅನುಭವಿಸಿತು. ಅತಿ ಹೆಚ್ಚು ರನ್ ಗಳಿಸಿಯೂ ಸೋಲು ಅನುಭವಿಸಿದ ಭಾರತದ ಕೆಟ್ಟ ಸಾಧನೆ ಇದಾಗಿದೆ.
ಒಟ್ಟಾರೆಯಾಗಿ ಭಾರತದ ಟೆಸ್ಟ್ ತಂಡದ ಕಪ್ತಾನ ಶುಭಮನ್ ಗಿಲ್, ಸೋಲಿನೊಂದಿಗೆ ತಮ್ಮ ಅಭಿಯಾನ ಆರಂಭಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.