ADVERTISEMENT

IND vs ENG 2nd T20I: ಇಂಗ್ಲೆಂಡ್‌ ವಿರುದ್ಧ ಸರಣಿ ಕೈವಶಪಡಿಸಿಕೊಂಡ ಟೀಮ್ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 17:00 IST
Last Updated 9 ಜುಲೈ 2022, 17:00 IST
ರವೀಂದ್ರ ಜಡೇಜ
ರವೀಂದ್ರ ಜಡೇಜ   

ಬರ್ಮಿಂಗ್‌ಹ್ಯಾಮ್: ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಅಮೋಘ ಬೌಲಿಂಗ್ ಬಲದಿಂದ ಭಾರತ ತಂಡವು ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿತು.

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಜಡೇಜ (ಔಟಾಗದೆ 46; 29ಎ, 4X5) ಮಿಂಚಿನ ಬ್ಯಾಟಿಂಗ್ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 170 ರನ್‌ ಗಳಿಸಿತು. ಅದಕ್ಕುತ್ತರವಾಗಿ ಇಂಗ್ಲೆಂಡ್ 17 ಓವರ್‌ಗಳಲ್ಲಿ 121 ರನ್ ಗಳಿಸಿ ಆಲೌಟ್ ಆಯಿತು. ಭುವನೇಶ್ವರ್ ಮೂರು ವಿಕೆಟ್ ಗಳಿಸಿದರು.

ಆರನೇ ಕ್ರಮಾಂಕದಲ್ಲಿ ಜಡೇಜ ಕ್ರೀಸ್‌ಗೆ ಬಂದಾಗ ತಂಡದ ಸ್ಥಿತಿ ಚೆನ್ನಾಗಿರಲಿಲ್ಲ. 89 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದು ಕೊಂಡಿತ್ತು.ಆದರೆ ಆತಂಕದ ನಡು ವೆಯೂ ಎಡಗೈ ಬ್ಯಾಟರ್ ಜಡೇಜ ದಿಟ್ಟ ಆಟವಾಡಿದರು. 158.62ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು.

ADVERTISEMENT

ರೋಹಿತ್–ರಿಷಭ್ ಉತ್ತಮ ಆರಂಭ:ನಾಯಕ ರೋಹಿತ್ ಶರ್ಮಾ (31) ಮತ್ತು ರಿಷಭ್ ಪಂತ್ (26) ಭಾರತಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 49 ರನ್‌ ಗಳಿಸಿದರು. ಐದನೇ ಓವರ್‌ನಲ್ಲಿ ರೋಹಿತ್ ವಿಕೆಟ್ ಗಳಿಸಿದ 34 ವರ್ಷದ ಗ್ಲೀಸನ್ ತಮ್ಮ ಖಾತೆ ತೆರೆದರು. ನಂತರದ ತಮ್ಮ ಇನ್ನೊಂದು ಓವರ್‌ನಲ್ಲಿ ದೊಡ್ಡ ಬೇಟೆಯನ್ನೇ ಆಡಿಬಿಟ್ಟರು. ಲಯ ಕಂಡುಕೊಳ್ಳಲು ಪರದಾಡುತ್ತಿರುವ ವಿರಾಟ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಪೇಸ್ ಮತ್ತು ಬೌನ್ಸ್‌ ಇದ್ದ ಎಸೆತವನ್ನು ಆಡುವ ಪ್ರಯತ್ನದಲ್ಲಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಡೇವಿಡ್ ಮಲಾನ್‌ಗೆ ಕ್ಯಾಚಿತ್ತ ವಿರಾಟ್ ನಿರಾಶೆ ಅನುಭವಿಸಿದರು. ನಂತರದ ಎಸೆತದಲ್ಲಿ ರಿಷಭ್ ಪಂತ್ ಸ್ವಿಂಗ್ ಎಸೆತವನ್ನು ಕೆಣಕಿ, ಕೀಪರ್ ಬಟ್ಲರ್‌ಗೆ ಕ್ಯಾಚಿತ್ತರು.

ಕಳೆದ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದ ಹಾರ್ದಿಕ್ ಪಾಂಡ್ಯ, ಸ್ಪೋಟಕ ಶೈಲಿಯ ಬ್ಯಾಟರ್‌ ಸೂರ್ಯಕುಮಾರ್ ಯಾದವ್, ಕೊನೆಯ ಹಂತದಲ್ಲಿ ಹರ್ಷಲ್ ಪಟೇಲ್ ಹಾಗೂ ಭುವನೇಶ್ವರ್ ಅವರ ವಿಕೆಟ್‌ಗಳನ್ನು ಗಳಿಸಿದ ಜೋರ್ಡಾನ್ ಮಧ್ಯಮ ಮತ್ತು ಕೆಳಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ದಿನೇಶ್ ಕಾರ್ತಿಕ್ ರನೌಟ್ ಆಗಿದ್ದು ಕೂಡ ಭಾರತ ತಂಡದ ದೊಡ್ಡ ಮೊತ್ತದ ಯೋಜನೆ ಫಲಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.