ತಂಡದ ಸಹ ಆಟಗಾರರೊಂದಿಗೆ ವರುಣ್ ಚಕ್ರವರ್ತಿ ಸಂಭ್ರಮ
(ಚಿತ್ರ ಕೃಪೆ: X/@BCCI)
ರಾಜ್‌ಕೋಟ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 26 ರನ್ ಅಂತರದ ಸೋಲಿಗೆ ಶರಣಾಗಿದೆ. ಆದರೂ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಬಳಗ ಗೆಲುವು ಸಾಧಿಸಿತ್ತು.
ಮತ್ತೊಂದೆಡೆ ಹ್ಯಾಟ್ರಿಕ್ ಸೋಲನ್ನು ತಪ್ಪಿಸಿರುವ ಆಂಗ್ಲರ ಪಡೆ ಸರಣಿಯನ್ನು ಜೀವಂತವಾಗಿರಿಸಿಕೊಂಡಿತು. ಇಂಗ್ಲೆಂಡ್ ಒಡ್ಡಿದ 172 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಒಂಬತ್ತು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ 'ಮಿಸ್ಟರಿ' ಸ್ಪಿನ್ನರ್ ವರುಣ್ ಚಕ್ರವರ್ತಿ ಎರಡನೇ ಸಲ ಐದು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
ಆದರೆ ಕಾಕತಾಳೀಯ ಎಂಬಂತೆ ಎರಡನೇ ಸಲವೂ ಭಾರತ ಸೋಲಿಗೆ ಶರಣಾಗಿದೆ. ಈ ಪಂದ್ಯದಲ್ಲಿ ವರುಣ್ ನಾಲ್ಕು ಓವರ್‌ಗಳಲ್ಲಿ 24 ರನ್ ಬಿಟ್ಟುಕೊಟ್ಟು ಐದರ ಗೊಂಚಲು ಪಡೆದರು.
ಕಳೆದ ವರ್ಷ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ವರುಣ್ ಐದು ವಿಕೆಟ್ ಸಾಧನೆ ಮಾಡಿದ್ದರು. ಅಂದು ಕೂಡ ಭಾರತ ಸೋಲನುಭವಿಸಿತ್ತು.
ಭಾರತದ ಸೋಲಿನ ಹೊರತಾಗಿಯೂ ವರುಣ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಅಲ್ಲದೆ ಪ್ರಸಕ್ತ ಸಾಗುತ್ತಿರುವ ಸರಣಿಯಲ್ಲಿ ವಿಕೆಟ್ ಬೇಟೆಯಲ್ಲಿ ಮುನ್ನಡೆಯಲ್ಲಿದ್ದಾರೆ. ಮೂರು ಪಂದ್ಯಗಳಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
'ಈ ಪಂದ್ಯ ಗೆಲ್ಲಲು ಸಾಧ್ಯವಾಗದೇ ಇರುವುದು ಬೇಸರ ತಂದಿದೆ. ಆದರೆ ಈಗ ಮುಂದಿನ ಪಂದ್ಯದತ್ತ ಗಮನ ಕೇಂದ್ರಿಕರಿಸಬೇಕಿದೆ. ತಂಡಕ್ಕಾಗಿ ಉತ್ತಮ ನಿರ್ವಹಣೆ ನೀಡುವ ಭರವಸೆ ಇದೆ' ಎಂದು ವರುಣ್ ಚಕ್ರವರ್ತಿ ಪ್ರತಿಕ್ರಿಯಿಸಿದ್ದಾರೆ.
ಸುಮಾರು 14 ತಿಂಗಳುಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿದ ಬಲಗೈ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲರಾದರು. ಮೂರು ಓವರ್‌ಗಳಲ್ಲಿ 25 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.
2023ರ ನವೆಂಬರ್‌ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಶಮಿ ಕೊನೆಯದಾಗಿ ಆಡಿದ್ದರು. ಅಂದು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಭಾರತದ ಟ್ರೋಫಿ ಕನಸು ಭಗ್ನಗೊಂಡಿತ್ತು.
ಶಮಿ ಅವರಿಗಾಗಿ ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಎಡಗೈ ಆರಂಭಿಕ ಆಟಗಾರ ಬೆನ್ ಡಕೆಟ್, ಮಧ್ಯಮ ಕ್ರಮಾಂಕದ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ನಾಯಕ ಜೋಸ್ ಬಟ್ಲರ್ ಉಪಯುಕ್ತ ಆಟದ ನೆರವಿನಿಂದ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡಕೆಟ್ 28 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಲಿವಿಂಗ್‌ಸ್ಟೋನ್ 24 ಎಸೆತಗಳಲ್ಲಿ 43 ಮತ್ತು ಬಟ್ಲರ್ 24 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. ಆ ಮೂಲಕ ಇಂಗ್ಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತು.
ಭಾರತೀಯ ಬ್ಯಾಟರ್‌ಗಳು ನಿರೀಕ್ಷೆ ಮುಟ್ಟುವಲ್ಲಿ ವಿಫಲರಾದರು. ಮತ್ತೊಂದೆಡೆ ಇಂಗ್ಲೆಂಡ್ ಬೌಲರ್‌ಗಳು ಸಾಂಘಿಕ ದಾಳಿ ನಡೆಸುವಲ್ಲಿ ಯಶಸ್ವಿಯಾದರು.
ಸಂಜು ಸ್ಯಾಮ್ಸನ್ 3, ಅಭಿಷೇಕ್ ಶರ್ಮಾ 24, ನಾಯಕ ಸೂರ್ಯಕುಮಾರ್ ಯಾದವ್ 14, ತಿಲಕ್ ವರ್ಮಾ 18, ವಾಷಿಂಗ್ಟನ್ ಸುಂದರ್ 6, ಅಕ್ಷರ್ ಪಟೇಲ್ 15 ಹಾಗೂ ಧ್ರುವ್ ಜುರೇಲ್ 2 ರನ್ ಗಳಿಸಿ ಔಟ್ ಆದರು.
ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿದರೂ ಪಂದ್ಯದ ಗತಿ ಬದಲಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಪರ ಜೇಮಿ ಓವರ್ಟನ್ ಮೂರು, ಜೋಫ್ರಾ ಆರ್ಚರ್ ಹಾಗೂ ಬ್ರೈಡನ್ ಕರ್ಸ್ ತಲಾ ಎರಡು ಮತ್ತು ಮಾರ್ಕ್ ವುಡ್ ಹಾಗೂ ಆದಿಲ್ ರಶೀದ್ ತಲಾ ಒಂದು ವಿಕೆಟ್‌ಗಳನ್ನು ಗಳಿಸಿದರು.
ಸರಣಿಯ ಮುಂದಿನ ಪಂದ್ಯ ಪುಣೆಯಲ್ಲಿ ಜ.31ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.