ADVERTISEMENT

IND vs ENG: ಇಂಗ್ಲೆಂಡ್ ತಿರುಗೇಟು; ಊಟದ ವಿರಾಮಕ್ಕೆ ಭಾರತ 80/4

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 6:19 IST
Last Updated 5 ಮಾರ್ಚ್ 2021, 6:19 IST
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ   

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ದ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೂ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ವೈಫಲ್ಯವನ್ನು ಅನುಭವಿಸಿದ್ದಾರೆ.

ಇಂಗ್ಲೆಂಡ್‌ನ 205 ರನ್‌ಗಳಿಗೆ ಉತ್ತರವಾಗಿ ಭಾರತ ತಂಡವು ಎರಡನೇ ದಿನದಾಟದ ಊಟದ ವಿರಾಮದ ಹೊತ್ತಿಗೆ 37.5 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ.

ಇನ್ನಿಂಗ್ಸ್ ಮುನ್ನಡೆಗಾಗಿ ಇನ್ನು ಆರು ವಿಕೆಟ್ ಬಾಕಿ ಉಳಿದಿರುವಂತೆಯೇ 125 ರನ್ ಗಳಿಸಬೇಕಾದ ಅಗತ್ಯವಿದೆ.

ADVERTISEMENT

ಒಂದು ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದ್ದ ಭಾರತ, ಎರಡನೇ ದಿನದಾಟದಲ್ಲೂ ಅತಿಯಾದ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತ್ತು. ಈ ತಂತ್ರವು ಆತಿಥೇಯರಿಗೆ ಮುಳುವಾಗಿ ಪರಿಣಮಿಸಿತ್ತು.

66 ಎಸೆತಗಳಲ್ಲಿ 17 ರನ್ ಗಳಿಸಿದ್ದ (1 ಬೌಂಡರಿ) ಚೇತೇಶ್ವರ್ ಪೂಜಾರ, ಸ್ಪಿನ್ನರ್ ಜ್ಯಾಕ್ ಲೀಚ್ ದಾಳಿಯಲ್ಲಿ ಔಟಾದರು. ಬಳಿಕ ಕ್ರೀಸಿಗಿಳಿದ ನಾಯಕ ವಿರಾಟ್ ಕೊಹ್ಲಿ (0) ಖಾತೆ ತೆರೆಯುವಲ್ಲಿ ವಿಫಲವಾದರು.

ಇದರೊಂದಿಗೆ ಸರಣಿಯಲ್ಲಿ ಎರಡನೇ ಬಾರಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಹೊರದಬ್ಬಿದ ಬೆನ್ ಸ್ಟೋಕ್ಸ್ ತಿರುಗೇಟು ನೀಡಿದರು. 41 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.

ಈ ನಡುವೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಆಸರೆಯಾದರು. ಇವರಿಗೆ ಉಪ ನಾಯಕ ಅಜಿಂಕ್ಯ ರಹಾನೆ ಸಾಥ್ ನೀಡಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ನೀಡಿದರು.

ಆದರೆ ಭೋಜನ ವಿರಾಮಕ್ಕೆ ಇನ್ನೇನು ಕ್ಷಣಗಳಿರುವಾಗ ರಹಾನೆ ಹೊರದಬ್ಬಿದ ಜೇಮ್ಸ್ ಆ್ಯಂಡರ್ಸನ್ ಮಗದೊಂದು ಆಘಾತ ನೀಡಿದರು. 45 ಎಸೆತಗಳನ್ನು ಎದುರಿಸಿದ ರಹಾನೆ ನಾಲ್ಕು ಬೌಂಡರಿಗಳಿಂದ 27 ರನ್ ಗಳಿಸಿದರು.

ಅತ್ತ 106 ಎಸೆತಗಳನ್ನು ಎದುರಿಸಿರುವ ರೋಹಿತ್ ಶರ್ಮಾ ನಾಲ್ಕು ಬೌಂಡರಿಗಳ ನೆರವಿನಿಂದ 32 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಪರ ಆ್ಯಂಡರ್ಸನ್ ಎರಡು ಮತ್ತು ಬೆನ್ ಸ್ಟೋಕ್ಸ್ ಹಾಗೂ ಜ್ಯಾಕ್ ಲೀಚ್ ತಲಾ ಒಂದು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.