ADVERTISEMENT

IND vs ENG: ಭಾರತಕ್ಕೆ ಪಂತ್ ಶತಕದಾಸರೆ; ಮೊದಲ ದಿನದಾಟದ ಅಂತ್ಯಕ್ಕೆ 338/7

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 2:55 IST
Last Updated 2 ಜುಲೈ 2022, 2:55 IST
ರವೀಂದ್ರ ಜಡೇಜ ಹಾಗೂ ರಿಷಭ್ ಪಂತ್
ರವೀಂದ್ರ ಜಡೇಜ ಹಾಗೂ ರಿಷಭ್ ಪಂತ್   

ಬರ್ಮಿಂಗ್‌ಹ್ಯಾಮ್: ವಿದೇಶದ ಅಂಗಳದಲ್ಲಿ ಮತ್ತೊಮ್ಮೆ ರಿಷಭ್ ಪಂತ್ ಭಾರತ ತಂಡಕ್ಕೆ ಆಸರೆಯಾದರು.ಭರ್ಜರಿ ಶತಕ ದಾಖಲಿಸಿದರು.

ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಟೆಸ್ಟ್‌ನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಜಿಮ್ಮಿ ಆ್ಯಂಡರ್ಸನ್ (52ಕ್ಕೆ3) ಕೊಟ್ಟ ಬಲವಾದ ಪೆಟ್ಟಿಗೆ ಆಘಾತ ಅನುಭವಿಸಿತು. ತಂಡದ ಮೊತ್ತವು ನೂರು ರನ್ ದಾಟುವ ಮುನ್ನವೇ ಐದು ವಿಕೆಟ್‌ಗಳು ಪತನವಾಗಿದ್ದವು.

ಆದರೆ, ಆತಿಥೇಯ ವೇಗಿಗಳ ಬಿರುಗಾಳಿಗೆ ಎದೆಗೊಟ್ಟು ನಿಂತ ದೆಹಲಿ ಹುಡುಗ ರಿಷಭ್ (146 ರನ್, 111 ಎ, 4X19,6X4), ದಿಟ್ಟವಾಗಿ ಬ್ಯಾಟ್‌ ಬೀಸಿದರು. 131.53ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. ಟಿ20 ಮಾದರಿಯ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.

ADVERTISEMENT

ಅವರಿಗೆ ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ (ಬ್ಯಾಟಿಂಗ್ 83, 163 ಎ, 4X10) ಜೊತೆ ನೀಡಿದರು. ಇದರಿಂದಾಗಿ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 73 ಓವರ್‌ಗಳಲ್ಲಿ 7ಕ್ಕೆ 338 ರನ್‌ ಗಳಿಸಿತು.

ಆರನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 222 ರನ್‌ ಗಳಿಸಿದರು. ಈ ಹಿಂದೆಯೂ ರಿಷಭ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತ ತಂಡವನ್ನು ಇಂತಹದೇ ಪರಿಸ್ಥಿತಿಗಳಿಂದ ಪಾರು ಮಾಡಿದ್ದರು. ವೇಗಿಗಳ ಸ್ವಿಂಗ್‌ಗಳನ್ನು ಚುರುಕಾಗಿ ಗುರುತಿಸಿದ ಅವರು ಬೌಂಡರಿಗಟ್ಟಿದ ರೀತಿ ಚಿತ್ತಾಪಹಾರಿಯಾಗಿತ್ತು.

ಐಪಿಎಲ್‌ನಲ್ಲಿ ಗಾಯಗೊಂಡು ದೀರ್ಘ ಕಾಲ ವಿಶ್ರಾಂತಿ ಪಡೆದಿದ್ದ ಜಡೇಜ ಕೂಡ ತಮ್ಮ ನೈಜ ಆಟಕ್ಕೆ ಕುದುರಿದ್ದು ತಂಡಕ್ಕೆ ಚೇತರಿಕೆ ಲಭಿಸಿತು.

ಕುಸಿದ ಅಗ್ರ ಬ್ಯಾಟರ್‌ಗಳು: ಕೋವಿಡ್‌ನಿಂದಾಗಿ ಪ್ರತ್ಯೇಕವಾಸಕ್ಕೆ ತೆರಳಿರುವ ರೋಹಿತ್ ಶರ್ಮಾ ಬದಲಿಗೆ ಚೇತೇಶ್ವರ್ ಪೂಜಾರ ಅವರು ಶುಭಮನ್ ಗಿಲ್ ಜೊತೆ ಇನಿಂಗ್ಸ್ ಆರಂಭಿಸಿದರು.

ಆದರೆ, ಹೊಸ ಚೆಂಡಿನ ದಾಳಿ ಎದುರಿಸಲು ಯುವ ಬ್ಯಾಟರ್ ಗಿಲ್ ಮತ್ತು ಅನುಭವಿ ಪೂಜಾರ ಪರದಾಡಿದರು. ಕೌಂಟಿಯಲ್ಲಿ ಉತ್ತಮ ಲಯಕ್ಕೆ ಮರಳಿದ್ದ ಪೂಜಾರ ಇಲ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.

ಏಳನೇ ಓವರ್‌ನಲ್ಲಿ ಜೇಮ್ಸ್ ಎಸೆತವು ಆಫ್‌ಸ್ಟಂಪ್‌ನಿಂದ ಸ್ವಲ್ಪ ಹೊರಗಿತ್ತು. ಅದನ್ನು ಆಡುವ ಪ್ರಯತ್ನ ಮಾಡಿದ ಗಿಲ್ ಎರಡನೇ ಸ್ಲಿಪ್‌ನಲ್ಲಿ ಜ್ಯಾಕ್ ಕ್ರಾಲಿಗೆ ಕ್ಯಾಚಿತ್ತರು. ಇಲ್ಲಿಂದ ಜಿಮ್ಮ ಬೇಟೆ ಆರಂಭವಾಯಿತು.

ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಪೂಜಾರಾಗೂ ಖೆಡ್ಡಾ ತೋಡಿದ ಜಿಮ್ಮಿ ಹಿರಿಹಿರಿ ಹಿಗ್ಗಿದರು. ನಾಲ್ಕು ಓವರ್‌ಗಳ ನಂತರ ಇನ್ನೊಂದು ಬದಿಯಿಂದ ವೇಗಿ ಮ್ಯಾಟಿ ಪಾಟ್ಸ್‌ ಕೂಡ ತಮ್ಮ ಕೈಚಳಕ ಮೆರೆದರು. ಆಟಕ್ಕೆ ಕುದುರಿಕೊಳ್ಳುತ್ತಿದ್ದ ಹನುಮವಿಹಾರಿಯನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ವಿರಾಟ್ ಕೊಹ್ಲಿ ಸ್ಟಂಪ್ ಕಿತ್ತ ಪಾಟ್ಸ್‌ ಸಂಭ್ರಮಿಸಿದರು.

ಕೊಹ್ಲಿಯ ವೈಫಲ್ಯಯಾತ್ರೆ ಮುಂದುವರಿಯಿತು. ಶ್ರೇಯಸ್ ಅಯ್ಯರ್ ತಮಗೆ ಲಭಿಸಿದ ಅವಕಾಶ
ಬಳಸಿಕೊಳ್ಳುವಲ್ಲಿ ವಿಫಲರಾದರು.

98 ರನ್ನಿಗೆ ಐದು ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಸಂಕಷ್ಟಕ್ಕೊಳಗಾಗಿತ್ತು. ಆದರೆ ಮುರಿಯದ ಐದನೇ ವಿಕೆಟ್‌ಗೆ 76 ರನ್‌ಗಳ ಜೊತೆಯಾಟ ಕಟ್ಟಿರುವ ಪಂತ್ ಹಾಗೂ ರವೀಂದ್ರ ಜಡೇಜ ತಂಡವನ್ನು ಮುನ್ನಡೆಸಿದರು.

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಈ ನಡುವೆ ಮಳೆಯಿಂದಾಗಿ ಪಂದ್ಯಕ್ಕೆ ಅಲ್ಪ ಹೊತ್ತು ಅಡಚಣೆ ಎದುರಾಗಿತ್ತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಜಸ್‌ಪ್ರೀತ್ ಬೂಮ್ರಾ ಮುನ್ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.