ADVERTISEMENT

IND vs ENG: ಪಂತ್, ಜಡೇಜ ಅಮೋಘ ಶತಕ; ಭಾರತ 416ಕ್ಕೆ ಆಲೌಟ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 10:58 IST
Last Updated 2 ಜುಲೈ 2022, 10:58 IST
ರವೀಂದ್ರ ಜಡೇಜ
ರವೀಂದ್ರ ಜಡೇಜ   

ಎಜ್‌ಬಾಸ್ಟನ್: ರಿಷಭ್ ಪಂತ್ (146) ಹಾಗೂ ರವೀಂದ್ರ ಜಡೇಜ (104) ಅಮೋಘ ಶತಕಗಳ ನೆರವಿನಿಂದ ಟೀಮ್ ಇಂಡಿಯಾ, ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 84.5 ಓವರ್‌ಗಳಲ್ಲಿ 416 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.

338/7 ಎಂಬ ಸ್ಕೋರ್‌ನಿಂದ ಎರಡನೇ ದಿನದಾಟ ಮುಂದುವರಿಸಿದ ಭಾರತ ತಂಡಕ್ಕೆ ಉತ್ತಮ ಮೊತ್ತ ಪೇರಿಸಲು ಜಡೇಜ ಹಾಗೂ ನಾಯಕ ಜಸ್‌ಪ್ರೀತ್ ಬೂಮ್ರಾ ನೆರವಾದರು.

ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಜಡೇಜ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಶತಕ ಸಾಧನೆ ಮಾಡಿದರು. 194 ಎಸೆತಗಳನ್ನು ಎದುರಿಸಿದ ಜಡೇಜ 13 ಬೌಂಡರಿಗಳ ನೆರವಿನಿಂದ 104 ರನ್ ಗಳಿಸಿದರು.

ADVERTISEMENT

ಕೊನೆಯ ಹಂತದಲ್ಲಿ ಅಬ್ಬರಿಸಿದ ಬೂಮ್ರಾ ಕೇವಲ 16 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿ ಔಟಾಗದೆ ಉಳಿದರು. ಈ ಪೈಕಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ದಾಖಲೆಯ 35 ರನ್ ಬಾರಿಸುವ (6 ಇತರೆ ರನ್ ಸೇರಿದಂತೆ) ಮೂಲಕ ಅಬ್ಬರಿಸಿದರು.

ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ಸ್ಟುವರ್ಟ್ ಬ್ರಾಡ್ ದುಬಾರಿಯೆನಿಸಿದರು.

ಇನ್ನುಳಿದಂತೆ ಮೊಹಮ್ಮದ್ ಶಮಿ 16 ಹಾಗೂ ಮೊಹಮ್ಮದ್ ಸಿರಾಜ್ 2 ರನ್ ಗಳಿಸಿದರು.

ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡ್ರೆಸನ್ ಐದು ವಿಕೆಟ್ ಸಾಧನೆ ಮಾಡಿದರು. ಮ್ಯಾಟಿ ಪಾಟ್ಸ್ ಎರಡು ಮತ್ತು ಸ್ಟುವರ್ಟ್ ಬ್ರಾಡ್, ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ತಲಾ ಒಂದು ವಿಕೆಟ್ ಗಳಿಸಿದರು.

ಮೊದಲ ದಿನದಲ್ಲಿ ಅಮೋಘ ಶತಕ ಗಳಿಸಿದ್ದ ರಿಷಭ್ ಪಂತ್ ಅಬ್ಬರದ ನೆರವಿನಿಂದ ಭಾರತ ತಂಡವು ಏಳು ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿತು.

ಟೆಸ್ಟ್ ಕ್ರಿಕೆಟ್‌ನಲ್ಲೂ ಟ್ವೆಂಟಿ-20 ಶೈಲಿಯಲ್ಲಿ ಬ್ಯಾಟ್ ಬೀಸಿದ ಪಂತ್, ಕೇವಲ 89 ಎಸೆತಗಳಲ್ಲಿ ಶತಕ ಗಳಿಸಿದ್ದರು. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದಿದ್ದ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.