ADVERTISEMENT

ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತಕ್ಕೆ ಜಯ

ಜೂಲನ್, ದೀಪ್ತಿ ಶಿಸ್ತಿನ ದಾಳಿ; ಡೇವಿಡ್‌ಸನ್ ರಿಚರ್ಡ್ಸ್‌ ಅರ್ಧಶತಕ

ಪಿಟಿಐ
Published 19 ಸೆಪ್ಟೆಂಬರ್ 2022, 4:44 IST
Last Updated 19 ಸೆಪ್ಟೆಂಬರ್ 2022, 4:44 IST
ಭಾರತ ತಂಡಕ್ಕೆ ಆಸರೆಯಾದ ಸ್ಮೃತಿ ಮಂದಾನ
ಭಾರತ ತಂಡಕ್ಕೆ ಆಸರೆಯಾದ ಸ್ಮೃತಿ ಮಂದಾನ   

ಹೊವ್‌, ಇಂಗ್ಲೆಂಡ್: ಸ್ನೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ಮಹಿಳಾ ತಂಡದವರು ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸಿದರು.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 227 ರನ್‌ ಗಳಿಸಿತು. ಭಾರತ 44.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗೆಲುವಿನ ಗಡಿ ದಾಟಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ ಗಳಿಸಿತು.

ಸ್ಮೃತಿ ಮಂದಾನ (91 ರನ್‌, 99 ಎ., 4X10, 6X1), ಹರ್ಮನ್‌ಪ್ರೀತ್‌ (ಔಟಾಗದೆ 74, 94 ಎ., 4X7, 6X1) ಮತ್ತು ಯಸ್ತಿಕಾ ಭಾಟಿಯಾ (50 ರನ್‌, 47 ಎ., 4X8, 6X1) ಅವರು ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ADVERTISEMENT

ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ, ಶಫಾಲಿ ವರ್ಮ (1) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಮಂದಾನ ಅವರು ಯಸ್ತಿಕಾ ಜತೆ ಎರಡನೇ ವಿಕೆಟ್‌ಗೆ 96 ಹಾಗೂ ಕೌರ್‌ ಜತೆ ಮೂರನೇ ವಿಕೆಟ್‌ಗೆ 99 ರನ್‌ ಸೇರಿಸಿ ತಂಡದ ಜಯಕ್ಕೆ ಕಾರಣರಾದರು.

ಉತ್ತಮ ಬೌಲಿಂಗ್‌: ತಮ್ಮ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುತ್ತಿರುವ ಜೂಲನ್ ಗೋಸ್ವಾಮಿ ಹಾಗೂ ದೀಪ್ತಿ ಶರ್ಮಾ ಅವರ ಉತ್ತಮ ದಾಳಿಯಿಂದಾಗಿ ಇಂಗ್ಲೆಂಡ್ ಸಾಧಾರಣ ಮೊತ್ತ ಗಳಿಸಿತು.

ಇಂಗ್ಲೆಂಡ್‌ನ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಆದರೆ, ಕೆಳಕ್ರಮಾಂಕದ ಡೇವಿಡಸನ್ ರಿಚರ್ಡ್ಸ್ (ಔಟಾಗದೆ 50; 61ಎ, 4X4), ಎಕ್ಸೆಲ್‌ಸ್ಟೊನ್ (31; 33ಎ, 4X4) ಹಾಗೂ ಶಾರ್ಲೊಟ್ ಡೀನ್ (ಔಟಾಗದೆ 24) ನೀಡಿದ ಮಹತ್ವದ ಕಾಣಿಕೆಗಳಿಂದಾಗಿ ತಂಡವು 200ರ ಗಡಿ ದಾಟಲು ಸಾಧ್ಯವಾಯಿತು.

10 ಓವರ್‌ಗಳನ್ನು ಬೌಲಿಂಗ್ ಮಾಡಿದ ಜೂಲನ್ ಕೇವಲ 20 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟರು. ಒಂದು ವಿಕೆಟ್ ಕೂಡ ಗಳಿಸಿದರು. ಇನ್ನೊಂದೆಡೆ ದೀಪ್ತಿ ಶರ್ಮಾ (33ಕ್ಕೆ2) ಕೂಡ ಶಿಸ್ತಿನ ದಾಳಿ ನಡೆಸಿದರು. ಉಳಿದ ಬೌಲರ್‌ಗಳು ಕೂಡ ಉತ್ತಮವಾಗಿ ಬೌಲಿಂಗ್‌ ಮಾಡಿದ್ದರಿಂದ ಆತಿಥೇಯ ಬಳಗವನ್ನು ನಿಯಂತ್ರಿಸಲು ಸಾಧ್ಯವಾಯಿತು.

ಜೂಲನ್, ಮೇಘನಾ ಸಿಂಗ್ ಹಾಗೂ ಹರ್ಲಿನ್ ಡಿಯೊಲ್ ಅಗ್ರಕ್ರಮಾಂಕದ ವಿಕೆಟ್‌ ಗಳಿಸಿದರು. ದೀಪ್ತಿ ಹಾಗೂ ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಮಧ್ಯಮಕ್ರಮಾಂಕಕ್ಕೆ ಪೆಟ್ಟುಕೊಟ್ಟರು.

ಸಂಕ್ಷಿಪ್ತ ಸ್ಕೋರು
ಇಂಗ್ಲೆಂಡ್:
50 ಓವರ್‌ಗಳಲ್ಲಿ 7ಕ್ಕೆ 227 (ಸೋಫಿಯಾ ಡಂಕ್ಲಿ 29, ಡೇನಿಯಲ್ ವೈಟ್ 43, ಡೇವಿಡಸನ್ ರಿಚರ್ಡ್ಸ್ ಔಟಾಗದೆ 50, ಸೋಫಿ ಎಕ್ಸೆಲ್‌ಸ್ಟೋನ್ 31, ಶಾರ್ಲೊಟ್ ಡೀನ್ ಔಟಾಗದೆ 24, ದೀಪ್ತಿ ಶರ್ಮಾ 33ಕ್ಕೆ2)

ಭಾರತ: 44.2 ಓವರ್‌ಗಳಲ್ಲಿ 3 ವಿಕೆಟ್‌ಗೆ 232 (ಸ್ಮೃತಿ ಮಂದಾನ 91, ಯಸ್ತಿಕಾ ಭಾಟಿಯಾ 50, ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 74, ಕೇರ್‌ ಕ್ರಾಸ್‌ 43ಕ್ಕೆ 2)

ಫಲಿತಾಂಶ: ಭಾರತಕ್ಕೆ 7 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.